ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳ ಪ್ರಕರಣದ ಎನ್‌ಐಎ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಧರ್ಮಸ್ಥಳ ಮತ್ತು ಹೆಗ್ಗಡೆ ಕುಟುಂಬದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆಯ ಮೇಲೆ ನಂಬಿಕೆ ಇಲ್ಲವೆಂದು ಹೇಳಿದರು. 

ಮಂಡ್ಯ (ಸೆ.17): ಧರ್ಮಸ್ಥಳ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಗೆ ಒತ್ತಾಯಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಿಜೆಪಿ ವಕ್ತಾರ ಸಿಟಿ ಮಂಜುನಾಥ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ಪ್ರಸನ್ನ, ಚಂದ್ರು, ವಕೀಲರಾದ ಸುನೀಲ್, ನಂದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬುರುಡೆ ಗ್ಯಾಂಗ್ ತಾಳಕ್ಕೆ ಕುಣಿಯುತ್ತಿದೆ ರಾಜ್ಯ ಸರ್ಕಾರ?

ಧರ್ಮಸ್ಥಳದಲ್ಲಿ ಕಳೆದ ಜುಲೈನಲ್ಲಿ ಬುರುಡೆ ಮ್ಯಾನ್ ಚಿನ್ನಯ್ಯ ಎಂಬಾತನಿಂದ ಆರಂಭವಾದ ಆರೋಪಗಳು, ಧರ್ಮಸ್ಥಳ, ಹೆಗ್ಗಡೆ ವಿರುದ್ಧ ಮಾಡಲಾದ ಗಂಭೀರ ಆರೋಪಗಳು ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಸ್ವಾಗತಿಸುವ ಬಿಜೆಪಿ, ಆದರೆ ಇದು ಪೂರ್ಣ ಪ್ರಮಾಣದಲ್ಲಿ ಷಡ್ಯಂತ್ರವನ್ನು ಬಯಲಿಗೆಳೆಯಲು ಸಾಧ್ಯವಿಲ್ಲ ಎಂಬುದು ತನಿಖೆಯ ವೇಳೆ ನಡೆಯುತ್ತಿರುವ ಬೆಳವಣಿಗೆಗಳ ಸಾಕ್ಷಿ ಎಂದರು.

SIT ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಎಂದು ವ್ಯಂಗ್ಯ

SIT ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಸಮೀರ್ ಟೀಮ್ ಎಂದು ವ್ಯಂಗ್ಯವಾಡಿದ ಬಿಜೆಪಿ ಕಾರ್ಯಕರ್ತರು, ಈ ತನಿಖೆಯ ಮೇಲೆ ತಮಗೆ ನಂಬಿಕೆ ಇಲ್ಲ. ಬುರಡೇ ಮ್ಯಾನ್ ಬಿಟ್ಟ ಬುರಡೇಗೆ ಸಾಕಷ್ಟು ಕಡೆ ಗುಂಡಿ ಅಗೆದರು. ಆದರೆ ಬುರುಡೆ ತಂದ ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸದ್ರಾ? ಸಮಗ್ರ ತನಿಖೆ ಮಾಡದೇ ಬುರುಡೆ ಗ್ಯಾಂಗ್ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧರ್ಮಸ್ಥಳ, ಹೆಗ್ಗಡೆ ವಿರುದ್ಧ ಷಡ್ಯಂತ್ರ ನಡೆಸಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ವಿದೇಶದಿಂದ 30ಕೋಟಿ ಫಂಡ್ ಬಂದಿದೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಗಂಭೀರ ಷಡ್ಯಂತ್ರ ನಡೆಸಿರುವ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಜರುಗಿಸದೇ, ಗ್ಯಾಂಗ್ ಹೇಳಿದಂತೆಲ್ಲ ಕೇಳುವ SIT ತನಿಖೆಯ ಮೇಲೆ ನಮಗೆ ನಂಬಿಕೆ ಇಲ್ಲ. ಮೊದಲು ಷಡ್ಯಂತ್ರದ ವಿರುದ್ದ ಸಮಗ್ರ ತನಿಖೆ ಮಾಡಿ ಸೌಜನ್ಯಳಿಗೆ ನ್ಯಾಯ ಕೊಡಿಸಿ. ಅದುಬಿಟ್ಟು ಸೌಜನ್ಯ ಕೊಲೆ ಪ್ರಕರಣ ನೆಪದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳದ ಮೇಲೆ ಅಪಪ್ರಚಾರ ನಡೆಯುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಎನ್‌ಐಎ ತನಿಖೆ ಸಂಸ್ಥೆಗೆ ಕೊಡಿ ಎಂದು ಡಿಸಿ ಮೂಲಕ ಮನವಿ ಸಲ್ಲಿಸಿದರು.