ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗಿನಿಂದ ವರ್ಷದಿಂದ ಪಿತೂರಿ ನಡೆದಿದೆ. ಕೊಡಗಿನಲ್ಲಿ ಮಹಿಳೆಯರ ಸಾಲ ಸಮಸ್ಯೆ ಬಳಸಿಕೊಂಡು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ನಡೆಸಲಾಗಿದೆ. ಎಡಿಟ್ ಮಾಡಿದ ವೀಡಿಯೋಗಳ ಮೂಲಕ ಸುಳ್ಳು ದೂರು ದಾಖಲಿಸಲಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.5): ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗಿನಿಂದ ಈಗಷ್ಟೇ ಅಲ್ಲ ಕಳೆದ ಒಂದು ವರ್ಷದಿಂದಲೇ ವ್ಯವಸ್ಥಿತ ಪಿತೂರಿ ಸಂಚು ನಡೆಸಿತ್ತು ಎನ್ನುವುದು ಬಟಾಬಯಲಾಗಿದೆ. ಹೌದು ಕಳೆದ ಒಂದು ವರ್ಷದಿಂದಲೇ ಕೊಡಗು ಜಿಲ್ಲೆಯ ವಿವಿಧೆಡೆ ಬುರುಡೆ ಗ್ಯಾಂಗ್ ಓಡಾಡಿದೆ. ಕೊಡಗಿನ ವಿವಿಧೆಡೆ ಓಡಾಡಿರುವ ಜಯಂತ್ ಮತ್ತು ತಂಡ ವಿವಿಧ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದು ಕಟ್ಟಲಾಗದೆ ಸಮಸ್ಯೆಗೆ ಸಿಲುಕಿದ್ದ ಮಹಿಳೆಯರನ್ನು ಭೇಟಿಯಾಗಿ ಅವರನ್ನು ಪ್ರತ್ಯೇಕ ಸಭೆ ನಡೆಸಿದೆ. ನಂತರ ಅದನ್ನೇ ಬಳಸಿಕೊಂಡು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ.
ಗೀತಾ ಎಂಬ ಮಹಿಳೆ ಭೇಟಿ ಮಾಡಿದ್ದ ಬುರುಡೆ ಟೀಂ:
ಕೊಡಗು ಜಿಲ್ಲೆ ವಿರಾಜಪೇಟೆಯ ನೆಹರು ನಗರದ ನಿವಾಸಿ ಗೀತಾ ಎಂಬುವರನ್ನು 2024 ರ ಡಿಸೆಂಬರ್ 24 ರಂದು ಭೇಟಿಯಾಗಿರುವ ತಂಡ ಅವರ ಸಮಸ್ಯೆಗಳ ಕುರಿತು ಮಾತನಾಡಿಸಿ ವೀಡಿಯೋ ಮಾಡಿಕೊಂಡಿದೆ. ಜೊತೆಗೆ ವೀರೇಂದ್ರ ಹೆಗ್ಗಡೆ ಮತ್ತು ಅನಿಲ್ ಅವರ ಹೆಸರುಗಳನ್ನು ಜಯಂತ್ ತಂಡವೇ ಸೇರಿಸಿ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. ಮಹಿಳೆಯನ್ನು ಮಾತನಾಡಿಸಿ ಮಾಡಿದ್ದ ವೀಡಿಯೋವನ್ನು ಎಡಿಟ್ ಮಾಡಿ ಬೇರೆ ಬೇರೆ ಫೈನಾನ್ಸ್ಗಳ ಹೆಸರನ್ನು ಕೈಬಿಟ್ಟು, ಧರ್ಮಸ್ಥಳ ಸಂಘದ ಹೆಸರನ್ನು ಮಾತ್ರವೇ ಉಳಿಸಿಕೊಂಡು ಧರ್ಮಸ್ಥಳ ಸಂಘದಿಂದಲೇ ಕಿರುಕುಳ ಆಗಿದೆ ಎನ್ನುವಂತೆ ಕುದ್ದು ಜಯಂತ್ ತಂಡವೇ ಮುಂದೆ ನಿಂತು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದೆ.
ಗೀತಾ ಅವರನ್ನು ಮಾತನಾಡಿಸಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದ ವೀಡಿಯೋವನ್ನು ನಂತರ ನೋಡಿದ ಮಹಿಳೆ ಗೀತಾಗೆ ಶಾಕ್ ಆಗಿದೆ. ನಾನು ಮಾತನಾಡಿದ್ದೇ ಬೇರೆ ಇವರು ಎಡಿಟ್ ಮಾಡಿ ಅಪ್ಲೋಡ್ ಮಾಡಿರುವ ವೀಡಿಯೋ ರೀತಿಯೇ ಬೇರೆ ಎಂದು ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ಕೊಡಗಿನಲ್ಲಿ ಇರುವ ಜನಜಾಗೃತಿ ಸಂಘಟನೆಯ ಮುಖಂಡರನ್ನು ಮಹಿಳೆ ಭೇಟಿಯಾಗಿ ಮಾತನಾಡಿದ್ದಾರೆ. ನಂತರ ಜನಜಾಗೃತಿ ಸಂಘಟನೆಯ ಮುಖಂಡರು ಜಯಂತ್ ಮತ್ತು ತಂಡದವರು ಕೊಡಗಿನಲ್ಲೂ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಕುರಿತು ತನಿಖೆ ಮಾಡಬೇಕು ಎಂದು ಕೊಡಗು ಎಸ್ಪಿ ಅವರಿಗೆ ದೂರು ನೀಡಿದೆ.
ಈಗ ಮಹಿಳೆ ಗೀತಾ ಅವರು ವೀಡಿಯೋ ಒಂದನ್ನು ಮಾಡಿ ನಾನು ಸಮಸ್ಯೆಗೆ ಸಿಲುಕಿರುವುದನ್ನು ಬಳಸಿಕೊಂಡು ಜಯಂತ್ ಮತ್ತು ಟೀಂ ದುರ್ಬಳಕೆ ಮಾಡಿಕೊಂಡಿದೆ. ಧರ್ಮಸ್ಥಳ ಸಂಘದ ವಿರುದ್ಧವಾಗಲಿ ಇಲ್ಲ, ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಲಿ ನಾನೇನೂ ದೂರು ಕೊಟ್ಟಿರಲಿಲ್ಲ ಎಂದು ಮಹಿಳೆ ಮತ್ತೊಂದು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಜನಜಾಗೃತಿ ಸದಸ್ಯ ಚಂದ್ರಮೋಹನ್ ಅವರು ಜಯಂತ್ ಕೂಡ ದೊಡ್ಡ ಪ್ರಮಾಣದಲ್ಲಿ ಬಡ್ಡಿ ಸಾಲಗಳನ್ನು ಕೊಟ್ಟಿದ್ದರು. ಇದು ಖಾಸಗಿ ಫೈನಾನ್ಸ್ಗಳು ಸಾಲ ವಸೂಲಾತಿ ಮಾಡುತ್ತಿದ್ದರ ಮೇಲೆ ಸುಪ್ರೀಂಕೋರ್ಟ್ ನಿರ್ದೇಶನ ಬಂದಿದ್ದರಿಂದ ನಮಗೂ ತೊಂದರೆ ಆಗುತ್ತದೆ ಎಂದು ಜಯಂತ್ ಧರ್ಮಸ್ಥಳ ಸಂಘ ಮತ್ತು ಧರ್ಮಸ್ಥಳದ ವಿರುದ್ಧ ಇಂತಹ ಒಂದು ಪಿತೂರಿ ಮಾಡಿದ್ದಾರೆ. ಇದರ ವಿರುದ್ಧ ಎನ್ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
