ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೊದಲ ಬಾರಿಗೆ ಹಾಸನಾಂಬ ದೇವಿಯ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ, ಗೃಹ ಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳ ಹಣವು ದೀಪಾವಳಿಯ ಮುನ್ನವೇ ಎರಡು-ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಿಹಿ ಸುದ್ದಿ ನೀಡಿದರು.
ಹಾಸನ, (ಅ.16): ನಾನು ಇದೇ ಮೊದಲ ಬಾರಿಗೆ ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದೇನೆ. ದೇವಿ ದರ್ಶನ ಪಡೆದಿರುವುದು ನನ್ನ ಸೌಭಾಗ್ಯ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಉತ್ತರ ಕರ್ನಾಟಕದಿಂದ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಬಾರಿಗೆ ಹಾಸನಾಂಬ ದೇವಿ ದರ್ಶನ ಪಡೆದರು. ದೇವಸ್ಥಾನದಲ್ಲಿ ಜನಸಾಮಾನ್ಯರ ಜೊತೆಯೇ ನಿಂತು ದರ್ಶನ ಪಡೆದದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹಾಸನಾಂಬೆ ತಾಯಿ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ:
ನಾವು ಉತ್ತರ ಕರ್ನಾಟಕದವರು, ಹಾಸನಾಂಬ ದೇವಿಯ ಮಹತ್ವದ ಬಗ್ಗೆ ಕೇಳಿದ್ದೆವು. ಎಸ್ಪಿ ಅವರನ್ನು ಕೇಳಿದೆ, 10-12 ಗಂಟೆಯೊಳಗೆ ಬರಬೇಕು ಎಂದರು. ಆದರೆ ದೇವಿ ಯಾವಾಗ ಕರೆಸಿಕೊಳ್ಳುತ್ತಾಳೆ, ಆಗ ಬರ್ತೀನಿ ಎಂದೆ. ಸಾವಿರ ರೂಪಾಯಿ ಟಿಕೆಟ್ ಪಡೆದು ದೇವಿ ದರ್ಶನಕ್ಕೆ ಬಂದೆ. ಜನರ ಜೊತೆಯೇ ಬಂದು ದರ್ಶನ ಪಡೆದಿರುವುದು ಖುಷಿ ತಂದಿದೆ ಎಂದರು. ಇದೇ ವೇಳೆ ಜಿಲ್ಲಾಡಳಿತ ಸದ್ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ವ್ಯವಸ್ಥೆ ಮಾಡಿರುವುದಾಗಿಯೂ ಸಚಿವೆ ಹೇಳಿದರು.
ದೀಪಾವಳಿ ಗುಡ್ ನ್ಯೂಸ್: ಅಗಸ್ಟ್ ಗೃಹ ಲಕ್ಷ್ಮಿ ಹಣ ಎರಡು-ಮೂರು ದಿನಗಳಲ್ಲಿ ಅಕೌಂಟ್‌ಗೆ!
ರಾಜ್ಯದ ಮಹಿಳೆಯರಿಗೆ ಸಂತೋಷದ ಸುದ್ದಿ ನೀಡಿರುವ ಸಚಿವೆ, ಗೃಹ ಲಕ್ಷ್ಮಿ ಯೋಜನೆಯಡಿ ಅಗಸ್ಟ್ ತಿಂಗಳ ಹಣವು ಎರಡು-ಮೂರು ದಿನಗಳಲ್ಲಿ ಅಕೌಂಟ್‌ಗಳಿಗೆ ಜಮಾ ಆಗುತ್ತದೆ ಎಂದರು. ಈಗಾಗಲೇ ಜುಲೈ ತಿಂಗಳ ವರೆಗಿನ ಹಣ ಕ್ಲಿಯರ್ ಆಗಿದೆ. ಈಗ ಅಗಸ್ಟ್ ತಿಂಗಳ ಹಣ ಕೊಟ್ಟಿದ್ದೇನೆ. ಎರಡು-ಮೂರು ದಿನದಲ್ಲಿ ಅದು ಅಕೌಂಟ್‌ಗೆ ಬರಲಿದೆ ಎಂದು ಭರವಸೆ ನೀಡಿದರು. ದೀಪಾವಳಿ ಹಬ್ಬದ ಮುನ್ನ ಈ ಸುದ್ದಿ ಮಹಿಳೆಯರಲ್ಲಿ ಸಂತೋಷವನ್ನು ಹೆಚ್ಚಿಸಿದೆ.
