ಮಂಗಳೂರಿನ ತಲಪಾಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ಬಸ್ಸಿನ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಿಪೇರಿ ಮಾಡಿ ಎಫ್‌ಸಿ ಪಡೆದುಕೊಂಡು ಬಂದಾಕ್ಷಣ ನಿಗಮದ ತಪ್ಪಿಲ್ಲ ಎಂದು ಹೇಳುತ್ತಿದೆ.

ದಕ್ಷಿಣ ಕನ್ನಡ/ಬೆಂಗಳೂರು (ಆ.28): ಮಂಗಳೂರಿನ ಡಿಪೋದ ಕೆಎಸ್‌ಆರ್‌ಟಿಸಿ ಬಸ್ ತಲಪಾಡಿ ಬಸ್ ನಿಲ್ದಾಣದಲ್ಲಿ 2 ಆಟೋಗಳಿಗೆ ಗುದ್ದಿ 6 ಜನರ ಸಾವಿಗೆ ಕಾರಣವಾಗಿದೆ. ಆದರೆ, ಈ ಬಸ್ಸಿನ ಆಯಸ್ಸು ಮುಗಿದಿದ್ದು, ಅದನ್ನು ಪುನಃ ಸದೃಢವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತೋರಿಸಿ ಫಿಟ್‌ನೆಸ್ ಸರ್ಟಿಫಿಕೇಟ್ ರಿನೀವಲ್ ಮಾಡಿಕೊಂಡು ಬಂದಿದ್ದರು. ಆದರೆ, ಈ ಡಕೋಟ ಬಸ್ ಓಡಿಸುತ್ತಿದ್ದ ಡ್ರೈವರ್ ಆಕ್ಸಿಂಡೆಂಟ್ ಮಾಡಿ 6 ಜನ ಸಾವಿಗೆ ಕಾರಣವಾಗಿದ್ದಾನೆ.

ಕಾಸಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಮಂಗಳೂರು-1 ಡಿಪೋದ ಬಸ್ ತಲಪಾಡಿ ಟೋಲ್‌ಗೇಟ್ ಹಿಂದೆ ಒಂದು ಆಟೋಗೆ ಗುದ್ದಿದೆ. ವೇಗವಾಗಿ ಬರುತ್ತಿದ್ದ ಬಸ್‌ಗೆ ಆಟೋ ಅಡ್ಡ ಬಂದಿದ್ದು, ಬ್ರೇಕ್ ಹಾಕಿದರೂ ನಿಲ್ಲದ ಕಾರಣ ಆಕ್ಸಿಡೆಂಟ್ ಆಗಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಅಯ್ಯೋ ಜನರು ಹೊಡೆಯುತ್ತಾರೆ ಎಂಬ ಭಯದಿಂದ ಬಸ್ ಇಳಿದು ಓಡಿ ಹೋಗಿದ್ದಾನೆ. ಆಗ ಇಳಿಜಾರಿನಲ್ಲಿ ನಿಂತಿದ್ದ ಬಸ್, ವೇಗವಾಗಿ ಹಿಂದಕ್ಕೆ ಹೋಗಿ ಹಿಂದೆ ನಿಂತಿದ್ದ ಮತ್ತೊಂದು ಆಟೋ ಹಾಗೂ ಬಸ್‌ಗಾಗಿ ಕಾಯುತ್ತಿದ್ದ ಜನರ ಪ್ರಾಣವನ್ನು ಬಲಿ ಪಡೆದಿದೆ.

ಆದರೆ, ಈ ಬಸ್ಸಿನ ಸದೃಢತೆ ಹೇಗಿತ್ತು ಎಂಬುದನ್ನು ಪರಿಶೀಲನೆ ಮಾಡಿದಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳೇ ಇದರ ವಿವರವನ್ನು ಹಂಚಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಮಾಹಿತಿ ಹಂಚಿಕೊಂಡಿದ್ದು, ಬಸ್ಸು ಸದೃಢವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ, ಈ ಅಪಘಾತದಲ್ಲಿ ನಿಗಮದ ತಪ್ಪಿಲ್ಲ, 14 ವರ್ಷದಿಂದ ಕೆಲಸ ಮಾಡುತ್ತಿರುವ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ತಪ್ಪು ಎಂದು ಹೇಳಿದ್ದಾರೆ. ಅವರು ಕೊಟ್ಟಿರುವ ಸ್ಪಷ್ಟನೆ ಇಲ್ಲಿದೆ ನೋಡಿ...

ಮಂಗಳೂರು-1ನೇ ಘಟಕದ ವಾಹನ ಸಂಖ್ಯೆ:KA19 F3407 ವಾಹನವನ್ನು ಆ.26 ರಂದು (ಮೊನ್ನೆ) ಫಿಟ್ನೆಸ್ ಸರ್ಟಿಫಿಕೇಟ್ (FC) ರಿನೀವಲ್ ಮಾಡಿಸಲಾಗಿತ್ತು. ನಿನ್ನೆ (ಆ.27ರಂದು) ಸೇವೆಗೆ ನಿಯೋಜಿಸಿದ್ದು, ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿ.ಮೀ. ಕ್ರಮಿಸಿರುತ್ತದೆ. ಹೀಗಾಗಿ, ಈ ವಾಹನವು ಆದ್ದರಿಂದ ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ ಡ್ರೈವರ್ 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮಾರ್ಗದಲ್ಲಿಯೇ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಗುಜರಿಗೆ ಹೋಗುವ ಬಸ್ಸನ್ನು ರಿಪೇರಿ ಮಾಡಿ ಎಫ್‌ಸಿ ಪಡೆದುಕೊಂಡು ಬಂದಾಕ್ಷಣ ನಿಗಮದ ತಪ್ಪಿಲ್ಲ ಎಂದು ಹೇಳುವ ಮೂಲಕ ಜನರ ಸಾವಿಗೆ ಜವಾಬ್ದಾರಿ ಹೊತ್ತುಕೊಳ್ಳದೇ ನುಣುಚಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ಈ ತಲಪಾಡಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಅಜ್ಜಿನಡ್ಕ ನಿವಾಸಿ ಖತೀಜ(60), ಅವರ ತಂಗಿ ನಫೀಸಾ (52), ಖತೀಜ ಅವರ ಅಣ್ಣನ ಮಗಳು ಹಸೀನ (13), ತಂಗಿಯ ಮಗಳು ಆಯಿಷ ಫಿದಾ(19) ಖತೀಜ ಅವರ ಮನೆಗೆ ಬಂದಿದ್ದ ಸಂಬಂಧಿ ಮಹಿಳೆ ಹವ್ವಮ್ಮ (70) ಹಾಗೂ ಅಜ್ಜಿನಡ್ಕದ ರಿಕ್ಷಾ ಚಾಲಕ ಹೈದರ್‌ ಆಲಿ (47) ಮೃತರಾಗಿದ್ದಾರೆ.