ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕೆ.ವೈ. ನಂಜೇಗೌಡರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಮತ ಎಣಿಕೆಯ ವಿಡಿಯೋ ದಾಖಲೆಗಳ ಕೊರತೆಯಿಂದಾಗಿ ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆಗೆ ಆದೇಶಿಸಿದ್ದು, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.

ಬೆಂಗಳೂರು (ಸೆ.16): ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದು, ನಾಲ್ಕು ವಾರಗಳ ಒಳಗಾಗಿ ಮರು ಮತ ಎಣಿಕೆ ನಡೆಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ. ಈ ಕುರಿತು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ ಎಣಿಕೆ ವಿಡಿಯೋ ಸಿಗದ ಕಾರಣ ಆದೇಶ:

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ ಅವರ ಗೆಲುವನ್ನು ಪ್ರಶ್ನಿಸಿ ಅವರ ಪ್ರತಿಸ್ಪರ್ಧಿ, ಮಾಜಿ ಶಾಸಕ ಹೂಡಿ ವಿಜಯ್ ಕುಮಾರ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ, ಮತ ಎಣಿಕೆಯ ವಿಡಿಯೋ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲರಾದರು. ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದೆ.

ಮತ ಎಣಿಕೆಯ ವಿಡಿಯೋ ದಾಖಲೆಗಳಿಲ್ಲದ ಕಾರಣ, ನ್ಯಾಯಾಲಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಪ್ರಜಾಪ್ರಭುತ್ವದ ಮೂಲ ತತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮರು ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶಿಸಿದೆ.

ಆದರೂ ನಂಜೇಗೌಡರಿಗೆ ತಾತ್ಕಾಲಿಕ ರಿಲೀಫ್:

ಹೈಕೋರ್ಟ್ ತನ್ನ ತೀರ್ಪಿನ ನಂತರ ನಂಜೇಗೌಡರಿಗೆ 30 ದಿನಗಳ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಅವಧಿಯಲ್ಲಿ ಅವರು ತಮ್ಮ ಶಾಸಕ ಸ್ಥಾನದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. 30 ದಿನಗಳವರೆಗೆ ಹೈಕೋರ್ಟ್ ತನ್ನದೇ ತೀರ್ಪಿಗೆ ತಡೆ ನೀಡಿದೆ. ಈ ಬೆಳವಣಿಗೆಯಿಂದ ಮಾಲೂರು ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪು ಈ ಕ್ಷೇತ್ರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.