ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಇಡಿ ದಾಳಿ ಚಳ್ಳಕೆರೆಯಲ್ಲಿ ದಾಳಿ ನಡೆಸಿ ₹24 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಇದೀಗ, ಒಟ್ಟು ವಶಪಡಿಸಿಕೊಂಡ ಆಸ್ತಿ ₹100 ಕೋಟಿ ದಾಟಿದೆ. ವೀರೇಂದ್ರ ಇ.ಡಿ. ಕಸ್ಟಡಿಯಲ್ಲಿದ್ದಾರೆ.

ಬೆಂಗಳೂರು (ಸೆ.09): ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ದಂಧೆಯ ಆರೋಪದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಚಳ್ಳಕೆರೆಯಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ ರೂ. 24 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ಜಪ್ತಿಯೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಒಟ್ಟು ಅಕ್ರಮ ಸಂಪತ್ತಿನ ಮೌಲ್ಯ ರೂ. 100 ಕೋಟಿಗೂ ಅಧಿಕವಾಗಿದೆ.

ಚಿನ್ನ ಮತ್ತು ಬೆಳ್ಳಿ ಜಪ್ತಿ:

ಸೆಪ್ಟೆಂಬರ್ 6, 2025 ರಂದು ಚಳ್ಳಕೆರೆಯಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು 21.43 ಕೆಜಿ ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಗಳು, 10.985 ಕೆಜಿ ತೂಕದ 11 ಚಿನ್ನ ಲೇಪಿತ ಬೆಳ್ಳಿ ಗಟ್ಟಿಗಳು ಮತ್ತು ಸುಮಾರು 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ವಸ್ತುಗಳ ಮೌಲ್ಯ ಸುಮಾರು ರೂ. ₹24 ಕೋಟಿ ಎಂದು ಅಂದಾಜಿಸಲಾಗಿದೆ.

ಇ.ಡಿ ಕಸ್ಟಡಿಯಲ್ಲಿ ತನಿಖೆ ಮುಂದುವರಿಕೆ:

ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಾಸಕರಾದ ಕೆ.ಸಿ. ವೀರೇಂದ್ರ ಅವರನ್ನು ಇ.ಡಿ ತನ್ನ ಕಸ್ಟಡಿಗೆ ಪಡೆದಿದೆ. ಸೆಪ್ಟೆಂಬರ್ 4, 2025 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರನ್ನು ಇನ್ನೂ ನಾಲ್ಕು ದಿನಗಳ ಕಾಲ ಇ.ಡಿ ಕಸ್ಟಡಿಗೆ ವಹಿಸಿ ಆದೇಶಿಸಿದೆ. ಈ ಅವಧಿಯಲ್ಲಿ, ಇ.ಡಿ ಅಧಿಕಾರಿಗಳು ಆನ್‌ಲೈನ್ ಬೆಟ್ಟಿಂಗ್ ದಂಧೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅನ್‌ಲೈನ್‌ ಬೆಟ್ಟಿಂಗ್‌ ಪ್ರಕರಣ: ಶಾಸಕ ಪಪ್ಪಿ ಇ.ಡಿ. ಕಸ್ಟಡಿ ಇಂದಿಗೆ ಅಂತ್ಯ, ಮತ್ತೆ ವಶಕ್ಕೆ?

ವಂಚನೆ ಜಾಲದ ವಿವರ ಬಹಿರಂಗ:

ಇ.ಡಿ ತನಿಖೆಯ ಪ್ರಕಾರ, ಆರೋಪಿ ಕೆ.ಸಿ. ವೀರೇಂದ್ರ ಅವರು ಕಿಂಗ್567, ರಾಜಾ567, ಲಯನ್567, ಪ್ಲೇ567, ಮತ್ತು ಪ್ಲೇವಿನ್567 ನಂತಹ ಹಲವಾರು ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು. ಈ ವೆಬ್‌ಸೈಟ್‌ಗಳ ಮೂಲಕ ಸಂಗ್ರಹಿಸಲಾದ ಹಣವನ್ನು ವಿವಿಧ ಪಾವತಿ ಗೇಟ್‌ವೇಗಳ ಮೂಲಕ ವರ್ಗಾಯಿಸಲಾಗಿದೆ ಎಂದು ತನಿಖೆ ಬಹಿರಂಗಪಡಿಸಿದೆ.

ಆನ್ ಲೈನ್ ವಂಚನೆ ಹಣದ ದುರ್ಬಳಕೆ:

ಅಕ್ರಮವಾಗಿ ಗಳಿಸಿದ ಹಣವನ್ನು ವೈಯಕ್ತಿಕ ಐಷಾರಾಮಿ ಜೀವನಕ್ಕೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ. ಆರೋಪಿಗಳು ಮತ್ತು ಅವರ ಕುಟುಂಬ ಸದಸ್ಯರು ಅಕ್ರಮ ಬೆಟ್ಟಿಂಗ್‌ನಿಂದ ಬಂದ ಹಣವನ್ನು ಮ್ಯೂಲ್ ಅಕೌಂಟ್‌ಗಳ ಮೂಲಕ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಬಳಸಿದ್ದಾರೆ.

ಇದಲ್ಲದೆ, ಕೆ.ಸಿ. ವೀರೇಂದ್ರ ಮತ್ತು ಅವರ ಕುಟುಂಬ ಬಳಸುತ್ತಿದ್ದ ಐಷಾರಾಮಿ ವಾಹನಗಳಾದ ಮರ್ಸಿಡಿಸ್-ಬೆನ್ಜ್ ಜಿಎಲ್‌ಎಸ್ 400 ಡಿ 4ಮ್ಯಾಟಿಕ್ ಮತ್ತು ರೇಂಜ್ ರೋವರ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಬೇರೆ ಬೇರೆ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತನಿಖೆ ಹೇಳಿದೆ. ಈ ವಾಹನಗಳ ಖರೀದಿಗೆ ಬಳಸಿದ ಹಣ ಅಕ್ರಮ ಸಂಪಾದನೆಯಿಂದ ಬಂದಿದೆ ಎಂದು ಇ.ಡಿ ಹೇಳಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.