ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಹಾಗೂ ದಾಖಲೆಗಳೆಲ್ಲವೂ ಪಾರದರ್ಶಕವಾಗಿವೆ. ಪರಿಷತ್ತಿನ-ಧರ್ಮದ-ಸ್ಥಳ ಸಹ, ಬೆಂಕಿಯ ಪರೀಕ್ಷೆಯಲ್ಲಿ ಹೊಳೆದು ಜಗಮಗಿಸಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದ್ದಾರೆ.
ಬೆಂಗಳೂರು (ಅ.03): ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಹಾಗೂ ದಾಖಲೆಗಳೆಲ್ಲವೂ ಪಾರದರ್ಶಕವಾಗಿವೆ. ಪರಿಷತ್ತಿನ-ಧರ್ಮದ-ಸ್ಥಳ ಸಹ, ಬೆಂಕಿಯ ಪರೀಕ್ಷೆಯಲ್ಲಿ ಹೊಳೆದು ಜಗಮಗಿಸಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದ್ದಾರೆ. ಕಸಾಪದ 108ನೇ ಮತ್ತು 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು, ಅ.5 ರಂದು ಬೆಳಗ್ಗೆ 11ಕ್ಕೆ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಆಯೋಜಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಲಾಗಿದೆ. ಆತೃಪ್ತ ಮತ್ತು ಅಸಂತುಷ್ಟ ವ್ಯಕ್ತಿಗಳ ಗುಂಪಿನಿಂದ ಸಭೆ ರದ್ದುಗೊಳಿಸಲು ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಆತಂಕ ಅಥವಾ ಗಾಬರಿಯಾಗಬೇಕಿಲ್ಲ.
ಪರಿಷತ್ತಿನ ಆಜೀವ ಸದಸ್ಯರೆಲ್ಲರೂ ಸಭೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಹೈಕೋರ್ಟ್ ಪರಿಷತ್ತಿನ ಕಾರ್ಯಕಾರಿ ಸಮಿತಿ ನಿರ್ಧರಿಸಿದಂತೆ ಅ.5ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಿ ಅಲ್ಲಿ ಕಾನೂನಾತ್ಮಕವಾಗಿ ಎಲ್ಲಾ ನಿರ್ಣಯ ತೆಗೆದುಕೊಂಡು ಅ.14ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದೆ. ಹಾಗೆಯೇ ಸರ್ಕಾರಕ್ಕೆ ಅ.14ರವರೆಗೆ ಯಾವುದೇ ಕ್ರಮವನ್ನು ಕಸಾಪ ಅಧ್ಯಕ್ಷರ ವಿರುದ್ಧ ತೆಗೆದುಕೊಳ್ಳದೆ, ತನ್ನ ನಿಲುವನ್ನು ನ್ಯಾಯಾಲಯಕ್ಕೆ ವರದಿ ಮೂಲಕ ತಿಳಿಸುವಂತೆ ಸ್ಪಷ್ಟವಾಗಿ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಸಂಡೂರಿನಲ್ಲಿ ನಡೆಯಬೇಕಿದ್ದ ಕಸಾಪ ವಾರ್ಷಿಕ ಸಭೆಯನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿ ಕೈಸುಟ್ಟುಕೊಂಡು, ಈ ರೀತಿ ಹೇಗಾದರೂ ಗಲಾಟೆ ಮಾಡಿ, ತೊಂದರೆ ಕೊಡಲು ಅತೃಪ್ತ ಮತ್ತು ಅಸಂತುಷ್ಟ ವ್ಯಕ್ತಿಗಳ ಗುಂಪು ಕಾರ್ಯಪ್ರವೃತ್ತವಾಗಿದೆ. ಕೆಲ ಮಾಧ್ಯಮಗಳಲ್ಲಿ ದುರುದ್ದೇಶದ ಸುದ್ದಿ ಹರಡಲಾಗುತ್ತಿದೆ ಎಂದು ದೂರಿದ್ದಾರೆ. ವಾರ್ಷಿಕ ಸಭೆಯಲ್ಲಿ ಲೆಕ್ಕಪತ್ರದ ಸಂಪೂರ್ಣ ವಿವರಗಳನ್ನು ಹಾಗೂ ಹಣಕಾಸು ಸಮಿತಿ ಮತ್ತು ಕಾರ್ಯಕಾರಿ ಸಮಿತಿ ನೀಡಿರುವ ಅನುಮೋದನೆಗಳ ವಿವರಗಳನ್ನು ನೀಡಲಾಗುತ್ತಿದೆ. ಈ ವರದಿಗಳು ವಾರ್ಷಿಕ ಸಭೆಯಲ್ಲಿ ಅನುಮೋದನೆಯಾದರೆ, ವಿಚಾರಣೆ ಊರ್ಜಿತವಾಗುತ್ತದೆ ಎಂಬುದನ್ನು ಅಡ್ವೋಕೇಟ್ ಜನರಲ್ ಅವರನ್ನು ಪ್ರತಿನಿಧಿಸಿದ ಅಡಿಷನಲ್ ಅಡ್ವೋಕೇಟ್ ಜನರಲ್ ಅವರೇ ನ್ಯಾಯಾಲಯದ ಎದುರು ಹೇಳಿದ್ದಾರೆ.
ಗಲಾಟೆ ಮಾಡಲು ಪ್ರಯತ್ನ
ಆದ್ದರಿಂದ ಈ ಗುಂಪಿನ ಎಲ್ಲರೂ ಗಾಬರಿಯಾಗಿ, ಈ ವಾರ್ಷಿಕ ಸಭೆಯಲ್ಲಿ ವಿವಾದಗಳನ್ನು ಎಬ್ಬಿಸಿ, ಗಲಾಟೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಧರ್ಮಸ್ಥಳದಲ್ಲಿ ಕುತಂತ್ರದಿಂದ, ಷಡ್ಯಂತ್ರದಿಂದ ನಿರಂತರವಾಗಿ ಅಪಪ್ರಚಾರ ಮಾಡಿದ ಘಟನೆ ಮತ್ತು ಅದರ ಪರಿಣಾಮವನ್ನು ಎಲ್ಲರೂ ನೋಡಿದ್ದಾರೆ. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತಿನ- ಧರ್ಮದ-ಸ್ಥಳವು ಸಹ, ಬೆಂಕಿಯ ಪರೀಕ್ಷೆಯಲ್ಲಿ ಹೊಳೆದು ಜಗಮಗಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ್ದಾರೆ.
