ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಭಾರೀ ಮಳೆಯಿಂದಾಗಿ ದೇವಸ್ಥಾನದ ಹುಂಡಿ ನೀರಿನಲ್ಲಿ ಮುಳುಗಿ, ನೋಟುಗಳು ನೆನೆದಿವೆ. ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿ ಹುಂಡಿಯಿಂದ ನೋಟುಗಳನ್ನು ತೆಗೆದು ಒಣಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸವದತ್ತಿ (ಆ.13): ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ, ಕೊಳ್ಳ ಉಕ್ಕಿ ಹರಿದು ಯಲ್ಲಮ್ಮನ ದೇವಸ್ಥಾನದಲ್ಲಿದ್ದ ಹುಂಡಿಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಹುಂಡಿಯಲ್ಲಿದ್ದ ನೋಟುಗಳೆಲ್ಲಾ ನೆನೆದಿದ್ದು, ಅದನ್ನು ದೇವಸ್ಥಾನದ ಪ್ರಾಂಗಣದಲ್ಲಿ ಹಾಕಿ ಒಣಗಿಸಲಾಗುತ್ತಿದೆ.
ಮಳೆ ನೀರು ಸಂಗ್ರಹಗೊಂಡ ಹುಂಡಿಗಳನ್ನು ಧಾರ್ಮಿಕದತ್ತಿ ಇಲಾಖೆ, ಸವದತ್ತಿ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ, ಬೈಲ್‌ಹೊಂಗಲ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ಸೇರಿದಂತೆ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಮ್ಮುಖದಲ್ಲಿ ಹುಂಡಿಯಲ್ಲಿದ್ದ ಹಣವನ್ನೆಲ್ಲ ಹೊರ ತೆಗೆದು ಒಣಗಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಯಲ್ಲಮ್ಮನ ಗುಡ್ಡಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ದೇವಸ್ಥಾನದಲ್ಲಿರುವ ಹುಂಡಿಯಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ಹಾಕಿ ಭಕ್ತಿ ಸಮರ್ಪಿಸುವದು ವಾಡಿಕೆಯಾಗಿದೆ. ಇತ್ತೀಚೆಗೆ ಹುಂಡಿಗಳ ಎಣಿಕೆ ನಡೆದಾಗ ೨೦೨೫ ಏ.೧ ರಿಂದ ಜೂ.೩೦ರ ಅವಧಿಯಲ್ಲಿ ₹೩.೩೯ ಕೋಟಿ ನಗದು, ₹೩೨.೯೪ ಲಕ್ಷ ಮೌಲ್ಯದ ಚಿನ್ನಾಭರಣ, ₹೯.೭೯ ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿದಂತೆ ₹೩.೮೧ ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿತ್ತು.
