ರಾಜ್ಯದ ಜೈಲಿನಲ್ಲಿರುವ ಕೈದಿಗಳಿಗೆ ದೇಶದಲ್ಲೇ ಹೆಚ್ಚು, 615 ರು. ದಿನಗೂಲಿ ಇದ್ದು, ಸೆರೆಮನೆಯಲ್ಲಿದ್ದುಕೊಂಡೇ ಮಾಸಿಕ 18 ಸಾವಿರ ರು.ವರೆಗೂ ದುಡಿಯುತ್ತಿದ್ದಾರೆ. ಇದೀಗ ಆ ಕೈದಿಗಳಿಗೆ ‘ಆರ್ಥಿಕ ಬರ’ ಎದುರಾಗಿದೆ. ಏಕೆಂದರೆ 2 ವರ್ಷಗಳಿಂದ ಕೈದಿಗಳ ದಿನಗೂಲಿ ಬಿಡುಗಡೆಗೊಳಿಸದೆ ತಡೆ ಹಿಡಿದಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯದ ಜೈಲಿನಲ್ಲಿರುವ ಕೈದಿಗಳಿಗೆ ದೇಶದಲ್ಲೇ ಅತಿ ಹೆಚ್ಚು, ಅಂದರೆ 615 ರು. ದಿನಗೂಲಿ ಇದ್ದು, ಸೆರೆಮನೆಯಲ್ಲಿದ್ದುಕೊಂಡೇ ಮಾಸಿಕ 18 ಸಾವಿರ ರು.ವರೆಗೂ ದುಡಿಯುತ್ತಿದ್ದಾರೆ. ಆದರೆ ಇದೀಗ ಆ ಕೈದಿಗಳಿಗೆ ‘ಆರ್ಥಿಕ ಬರ’ ಎದುರಾಗಿದೆ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕೈದಿಗಳ ದಿನಗೂಲಿ ಬಿಡುಗಡೆಗೊಳಿಸದೆ ರಾಜ್ಯ ಸರ್ಕಾರ ತಡೆ ಹಿಡಿದಿದೆ.
ಇದು ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಕೈದಿಗಳ ದಿನಗೂಲಿ ಏರಿಕೆಯಿಂದ ಎದುರಾದ ಹೆಚ್ಚುವರಿ ವೆಚ್ಚ ಭರಿಸಲು ಸರ್ಕಾರಕ್ಕೆ ಹಣಕಾಸು ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.
ಎರಡು ವರ್ಷಗಳಲ್ಲಿ 33 ಕೋಟಿ ರು. ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ. ಈ ಹಣ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಮನವಿ ಸಲ್ಲಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಕೊಲೆ, ದರೋಡೆ, ಸುಲಿಗೆ, ಅತ್ಯಾ*ರ ಹಾಗೂ ವಂಚನೆ ಹೀಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಕೈದಿಗಳು ಶ್ರಮದಾನ ಮಾಡಬೇಕಾಗುತ್ತದೆ. ಈ ಶ್ರಮದಾನ ಭಾಗವಾಗಿ ಕೈದಿಗಳು ಬಯಸುವ ಕೆಲಸಗಳು ಹಂಚಿಕೆಯಾಗುತ್ತವೆ. ಅದರಲ್ಲಿ ತರಬೇತಿ, ಅರೆ ಕುಶಲ, ಕುಶಲ ಹಾಗೂ ಹೆಚ್ಚಿನ ಕುಶಲ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಕೈದಿಗಳನ್ನು ವಿಭಾಗಿಸಿ ದಿನಗೂಲಿ ನಿಗದಿಪಡಿಸಲಾಗುತ್ತದೆ. ಅಂತೆಯೇ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಸೇರಿದಂತೆ ರಾಜ್ಯದ ಜೈಲುಗಳಲ್ಲಿ ಪ್ರಸುತ್ತ 1288 ಕೈದಿಗಳು ದಿನಗೂಲಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರಿಷ್ಠ 18 ಸಾವಿರ ರು. ಸಂಪಾದನೆ
ದಿನಗೂಲಿಯ 1288 ಕೈದಿಗಳ ಪೈಕಿ ಕುಶಲ ಪ್ರವರ್ಗಕ್ಕೆ ನಾಲ್ವರು ಸೇರಿದ್ದಾರೆ. ಈ ಕೈದಿಗಳಿಗೆ 615 ರು. ದಿನಗೂಲಿ ಇದ್ದು, ಅವರ ಖಾತೆಗೆ ಮಾಸಿಕ 18,450 ರು. ಸಿಗಬಹುದು. ಇದು ದೇಶದಲ್ಲೇ ಅತಿ ಹೆಚ್ಚು. ಆದರೆ ಸರ್ಕಾರಿ ರಜಾ ದಿನಗಳು ಹಾಗೂ ವೈಯಕ್ತಿಕ ರಜೆ ದಿನಗಳು ಗಣನೆಗೆ ಬರುವುದಿಲ್ಲ. ಹಾಗೆಯೇ ನಿಗದಿತ ಸಮಯಕ್ಕಿಂತ ಕಡಿಮೆ ಕೆಲಸ ಮಾಡಿದರೂ ಅವರು ದುಡಿದ ಸಮಯವನ್ನು ಲೆಕ್ಕ ಹಾಕಿ ಕೂಲಿ ನೀಡಲಾಗುತ್ತದೆ. ಹೀಗಾಗಿ ದಿನಗೂಲಿ ಸ್ವಲ್ಪ ಏರುಪೇರಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಡುಗೆ ವಿಭಾಗದ ಕೈದಿಗಳಿಗೆ ಹೆಚ್ಚಿನ ದಿನಗೂಲಿ ಸಿಗುತ್ತದೆ. ಈ ವಿಭಾಗವು ವರ್ಷದ 365 ದಿನಗಳೂ ಕಾರ್ಯನಿರ್ವಹಿಸಲಿದ್ದು, ರಜೆ ದಿನಗಳಲ್ಲಿ ಕೈದಿಗಳು ಕೆಲಸ ಮಾಡಿದರೆ ಹೆಚ್ಚುವರಿ ಕೆಲಸದ ಆಧಾರದ ಮೇರೆಗೆ ಪ್ರತ್ಯೇಕ ಕೂಲಿ ಸಿಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಖಾತೆಗೆ ನೇರ ಹಣ ಜಮೆ:
ಕೈದಿಗಳ ಖಾತೆಗೆ ನೇರವಾಗಿ ದಿನಗೂಲಿ ಜಮೆಯಾಗುತ್ತದೆ. ಜನಧನ್ ಕಾರ್ಯಕ್ರಮದ ಮೂಲಕ ಕೈದಿಗಳಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ವಾರಕೊಮ್ಮೆ ದಿನಗೂಲಿ ಲೆಕ್ಕ ಹಾಕಿ ಕೈದಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ತಾವು ದುಡಿದು ಸಂಪಾದಿಸಿದ ಹಣವನ್ನು ಕುಟುಂಬದವರಿಗೆ ನೀಡಲು ಕೈದಿಗಳಿಗೆ ಅವಕಾಶವಿದೆ. ಇಲ್ಲದೆ ಹೋದರೆ ಜೈಲಿನಿಂದ ಬಿಡುಗಡೆ ವೇಳೆ ಅವರಿಗೆ ದಿನಗೂಲಿ ಹಣ ಹಂಚಿಕೆಯಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವೇತನ ಪರಿಷ್ಕರಣೆ ಆಗಿಲ್ಲ:
ಐದು ವರ್ಷಗಳ ಹಿಂದೆ ಕೈದಿಗಳಿಗೆ ಕನಿಷ್ಠ 175 ರಿಂದ ಗರಿಷ್ಠ 250 ರು. ನೀಡಲಾಗುತ್ತಿತ್ತು. ಆದರೆ 2022ರಲ್ಲಿ ಕಾರ್ಮಿಕ ಕಾಯ್ದೆಯಡಿ ಕೈದಿಗಳನ್ನು ಪರಿಗಣಿಸಲಾಯಿತು. ಬಳಿಕ ಕೈದಿಗಳ ದಿನಗೂಲಿ ಸಹ ಮೂರು ಪಟ್ಟು ಹೆಚ್ಚಾಯಿತು. ಇನ್ನು ಮೂರು ವರ್ಷಗಳಿಗೊಮ್ಮೆ ದಿನಗೂಲಿ ಪರಿಷ್ಕರಣೆ ಮಾಡಬೇಕು. ಆದರೆ ಇದುವರೆಗೆ ಮತ್ತೆ ದಿನಗೂಲಿ ಪರಿಷ್ಕರಣೆ ಆಗಿಲ್ಲ ಎಂದು ಮೂಲಗಳು ಹೇಳಿವೆ.
ಕೈದಿ ಕೆಲಸಗಾರರ ವಿವರ ಹೀಗಿದೆ:
ಅಡುಗೆ ಕೆಲಸಗಾರರ- 399, ಸ್ವಚ್ಛತಾ ವಿಭಾಗ-421, ಕಾವಲುಗಾರರು-140, ಕೈಗಾರಿಕೆ ವಿಭಾಗ-176, ಕೃಷಿ-125 ಹಾಗೂ ಇತರೆ ಕೆಲಸ-27 ಸೇರಿದಂತೆ ಒಟ್ಟು 1288 ಕೈದಿಗಳು ದಿನಗೂಲಿಗಳಾಗಿ ಜೈಲಿನಲ್ಲಿ ದುಡಿಯುತ್ತಿದ್ದಾರೆ. ಇದರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹ ಇದ್ದಾರೆ. ಪ್ರಜ್ವಲ್ ಗ್ರಂಥಾಲಯದ ಸಹಾಯಕನಾಗಿದ್ದು, ಅದು ತರಬೇತಿ ಪ್ರವರ್ಗಕ್ಕೆ ಬರುತ್ತದೆ. ಇನ್ನು ತಮ್ಮ ಮೇಲಿನ ಇತರೆ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವ ದಿನಗಳು ಹಾಗೂ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಅವರಿಗೆ ಕೂಲಿ ಸಿಗುತ್ತಿದೆ.
ದಿನಗೂಲಿ ನಾಲ್ಕು ಪ್ರವರ್ಗಗಳು ಹೀಗಿವೆ
ಪ್ರವರ್ಗ - ದಿನಗೂಲಿ
ತರಬೇತಿ ಕೆಲಸಗಾರ 524 ರು
ಅರೆ ಕುಶಲ 548 ರು
ಕುಶಲ 615 ರು
ಹೆಚ್ಚಿನ ಕುಶಲ 663 ರು
ದಿನಗೂಲಿ ವೆಚ್ಚದ ಹಣ
ಪ್ರವರ್ಗ ಕೈದಿಗಳು ದಿನಗೂಲಿ ಮಾಸಿಕ ವಾರ್ಷಿಕ
ತರಬೇತಿ ಕೆಲಸಗಾರ ₹1194 - ₹524 - ₹1,87,69,680 - ₹22,52,36,160
ಅರೆ ಕುಶಲ ₹90 - ₹548 - ₹14,79,600 - ₹1,77,55,200
ಕುಶಲ ₹4 ₹615 ₹73,800 ₹8,85,600
....................................................................
ಒಟ್ಟು 1288 ಕೈದಿಗಳು
₹2,03,23,080
₹24,38,76,960
