ರಾಜ್ಯದ ಪ್ರಗತಿಗೆ ಕಂಟಕವಾಗಿ ಪರಿಣಮಿಸಿದ್ದ ಸಂವಿಧಾನ ವಿರೋಧಿ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುವಲ್ಲಿ ನಮ್ಮ ಪೊಲೀಸರು ಯಶಸ್ಸು ಕಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

ಬೆಂಗಳೂರು (ಅ.22): ರಾಜ್ಯದ ಪ್ರಗತಿಗೆ ಕಂಟಕವಾಗಿ ಪರಿಣಮಿಸಿದ್ದ ಸಂವಿಧಾನ ವಿರೋಧಿ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುವಲ್ಲಿ ನಮ್ಮ ಪೊಲೀಸರು ಯಶಸ್ಸು ಕಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು. ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ಘನತೆ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಬಿದ್ದಿದೆ.‌ ಇದರ ಶ್ರೇಯಸ್ಸು ಪೊಲೀಸರಿಗೆ ಸಲ್ಲಬೇಕು. ಹಾಗೆಯೇ ಮಾದಕ ವಸ್ತು ಹಾವಳಿಗೂ ನಿಯಂತ್ರಣಕ್ಕೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಶಾಂತಿ-ಸುವ್ಯವಸ್ಥೆ ಉತ್ತಮವಾಗಿದ್ದರೆ ನಾಡು ಪ್ರಗತಿ ಕಾಣಲಿದೆ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಠಾಣೆಗಳನ್ನು ಆರಂಭಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡಬೇಕು ಎಂದು ಕರೆ ನೀಡಿದರು. ದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯದ ಪೊಲೀಸರು ಅಗ್ರ ಸ್ಥಾನದಲ್ಲಿದ್ದಾರೆ. ಕೋಮು ಶಕ್ತಿಗಳು, ದುಷ್ಟಶಕ್ತಿಗಳ ನಿಗ್ರಹದಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದು ಹೊಗಳಿದರು.

ಹುತ್ಮಾತರಿಗೆ ಸಿಎಂ ನಮನ: ಇದೇ ಕಾರ್ಯಕ್ರಮದಲ್ಲಿ ಕರ್ತವ್ಯದ ವೇಳೆ ಮಡಿದ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ನಮನ ಸಲ್ಲಿಸಿದರು. ಪೊಲೀಸರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮಡಿದ ಪೊಲೀಸರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್‌, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅನುಕಂಪದಡಿ 116 ಮಂದಿಗೆ ಸರ್ಕಾರಿ ನೌಕರಿ

ಸರ್ಕಾರವು ಅನುಕಂಪದಡಿ 116 ಪೊಲೀಸ್ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಿದೆ. ನಿವೃತ್ತ ಪೊಲೀಸರ ಆಯೋಗ್ಯ ಯೋಜನೆಯ ವೈದ್ಯಕೀಯ ಮರುಪಾವತಿ ವೆಚ್ಚವನ್ನು 1 ಲಕ್ಷ ರು ನಿಂದ 1.5 ಲಕ್ಷ ರು. ಹಾಗೂ ಪೊಲೀಸರ ವಾರ್ಷಿಕರ ಆರೋಗ್ಯ ತಪಾಸಣಾ ವೆಚ್ಚವನ್ನು 1000 ರು. ದಿಂದ 1500 ಸಾವಿರ ರು.ಗೆ ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.