Karnataka police new guidelines: ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು, ಸಾರ್ವಜನಿಕರು ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಪೊಲೀಸರ ನಡವಳಿಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಪೊಲೀಸರ ಹೊಸ ಮಾರ್ಗಸೂಚಿಗಳಲ್ಲಿ ಏನೇನು ಇವೆ ಎಂಬುದು ಇಲ್ಲಿ ತಿಳಿಯಿರಿ.

ಬೆಂಗಳೂರು (ಅ.25): ಸಮಾಜದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳುವ ಕುರಿತು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಮಾರ್ಗಸೂಚಿ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರ ನಡೆವಳಿಕೆಯಲ್ಲಿ ಸೌಜನ್ಯ, ಘನತೆ ಕಾಣಬೇಕು

ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿ ಪರಿಣಾಮಕಾರಿ ಕಾನೂನು ಜಾರಿ ಮತ್ತು ಸಮುದಾಯದ ಜತೆಗಿನ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮುಖ್ಯ. ಪೊಲೀಸರ ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು. ಸಕಾರಾತ್ಮಕ ಮತ್ತು ವೃತ್ತಿಪರ ನಡವಳಿಕೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಮೇಲಿನ ನಂಬಿಕೆ ಮತ್ತು ಸಹಕಾರ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸೂಚನೆಗಳು:

-ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ಗಮನಿಸದೇ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.

- ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಅಥವಾ ವರ್ತನೆ ತೋರದೆ ಸೌಜನ್ಯ ಮತ್ತು ಘನತೆಯಿಂದ ವರ್ತಿಸಬೇಕು. ಕಾನೂನು ಜಾರಿಗೊಳಿಸುವಲ್ಲಿ ದೃಢತೆಯನ್ನು ಪ್ರದರ್ಶಿಸಬೇಕು.

- ಯಾವುದೇ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಯಾವುದೇ ರೀತಿಯ ಬೇಡಿಕೆ ಇಡುವುದರಿಂದ ಅಥವಾ ಯಾವುದೇ ಅಕ್ರಮ ಸಹಾಯ/ಲಾಭವನ್ನು ಸ್ವೀಕರಿಸುವುದರಿಂದ ಸಂಪೂರ್ಣವಾಗಿ ದೂರವಿರಬೇಕು.

- ಕರ್ತವ್ಯದ ಸಮಯದಲ್ಲಿ/ಕರ್ತವ್ಯ ಮುಗಿದ ನಂತರವೂ ನೈತಿಕವಾಗಿ ಇತರರಿಗೆ ಮಾದರಿಯಾಗುವಂತೆ ಇದ್ದು ಇಲಾಖೆಯ ನೀತಿ-ನಿಯಮಗಳನ್ನು ಎತ್ತಿಹಿಡಿಯಬೇಕು.

- ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.

- ಮಹಿಳೆಯರನ್ನು ಸಂಜೆ 6ರ ನಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಅಥವಾ ಹೇಳಿಕೆ ನೀಡಲು ಕರೆತರಬಾರದು.