ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹೋಂಡಾ ಇಂಡಿಯಾ ಫೌಂಡೇಶನ್ ನೀಡಿದ 50 ಗಸ್ತು ವಾಹನಗಳನ್ನು ಹಸ್ತಾಂತರಿಸಿದರು. ಈ ವೇಳೆ, ಬೆಂಗಳೂರಿನ ಸಂಚಾರ ವ್ಯವಸ್ಥೆ, ಹೊಸ 'ಬಿಟಿಪಿ ಅಸ್ತ್ರಂ ಇ-ಆ್ಯಕ್ಸಿಡೆಂಟ್' ಆವಿಷ್ಕಾರ, ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಾತನಾಡಿದರು.

ಕಿರಣ್‌.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಅ.18): ಮುಂಬೈ, ಕೋಲ್ಕತ್ತಾ, ದೆಹಲಿ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ರವರ ಸಹಯೋಗದಲ್ಲಿ 50 ಸಂಚಾರ ಗಸ್ತು ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಸಂಚಾರಿ ಪೊಲೀಸರಿಗೆ 50 ಗಸ್ತು ವಾಹನ ವಿತರಣೆ:

ದೊಡ್ಡ ಕಂಪನಿಗಳು, ಕೈಗಾರಿಕೆಗಳು ಸಾರ್ವಜನಿಕರಿಗೆ ಉಪಯೋಗ ಅಗುವ ಕೆಲಸ ಮಾಡಬೇಕು. ತಮ್ಮ ಲಾಭದಲ್ಲಿ ಶೇ. 2ರಷ್ಟು ಖರ್ಚು ಮಾಡಬೇಕು ಎಂಬ ನಿಯಮ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಕಂಪನಿಗಳು ಕೆಲಸ ಮಾಡುತ್ತಿವೆ. ಹೋಂಡಾ ಸಂಸ್ಥೆಯವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ 1.30 ಕೋಟಿ ರೂ. ವೆಚ್ಚದಲ್ಲಿ 50 ಗಸ್ತು ವಾಹನಗಳನ್ನು ನೀಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿದ್ದಾರೆ. ಈ ದ್ವಿಚಕ್ರ ವಾಹನಗಳು ಟ್ರಾಫಿಕ್ ನಿಯಂತ್ರಿಸಲು ಪೊಲೀಸರಿಗೆ ಉಪಯೋಗ ಆಗುತ್ತವೆ ಎಂದು ಹೇಳಿದರು.

ಸರ್ಕಾರವು ಗಮನದಲ್ಲಿಟ್ಟುಕೊಂಡು‌ ಪ್ರತಿವರ್ಷ ನೂರಾರು ವಾಹನಗಳನ್ನು‌ ಖರೀದಿಸಿ, ನೀಡಲಾಗುತ್ತದೆ.‌ ಈ ವರ್ಷ 500 ವಾಹನಗಳನ್ನು‌ ಖರೀದಿಸಲಾಗಿದೆ ಎಂದರು.

ಈ ಹಿಂದೆ ಪೊಲೀಸ್ ಅಧಿಕಾರಿಗಳ ನಿಯೋಗವನ್ನು‌ ಲಂಡನ್‌ಗೆ ಕರೆದೊಯ್ಯಲಾಗಿತ್ತು.‌ ಲಂಡನ್ ಮೆಟ್ರೋ ಪೊಲೀಸರು ಕಮಾಂಡ್ ಸೆಂಟರ್‌ನ ಕಾರ್ಯವೈಖರಿಯನ್ನು ಪರಿಚಯಿಸಿದ್ದರು. ಅಪಘಾತ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ್ದರು.

ಅದೇ ರೀತಿಯ ಕಮಾಂಡ್ ಸೆಂಟರ್ ಯಾಕೆ ನಾವು ಮಾಡಬಾರದು ಎಂಬ ನಿಟ್ಟಿನಲ್ಲಿ, 26 ಕೋಟಿ ರೂ. ಖರ್ಚು‌ ಮಾಡಿ‌ ಬೆಂಗಳೂರು ನಗರದಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ಸಾರ್ವಜನಿಕರ ಯಾವುದೇ ರೀತಿಯ ತುರ್ತು ಕರೆಗಳಿಗೆ ಪೊಲೀಸರು 9 ನಿಮಿಷದಲ್ಲಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ಸಂಚಾರ ಪೊಲೀಸರಿಂದ ಹೊಸ ಆವಿಷ್ಕಾರ:

ಬೆಂಗಳೂರು ನಗರ ಸಂಚಾರ ಪೊಲೀಸರು 'ಬಿಟಿಪಿ ಅಸ್ತ್ರಂ ಇ-ಆ್ಯಕ್ಸಿಡೆಂಟ್' ಹೊಸ ಆವಿಷ್ಕಾರವನ್ನು ಪರಿಚಯಿಸಿದ್ದಾರೆ.‌ ಅಪಘಾತದ ಸಂದರ್ಭದಲ್ಲಿ ಯಾರು ಸ್ಪಂದಿಸುವುದಿಲ್ಲ. ಅಲ್ಲದೇ, ವಿಮೆ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಇದರ ಒತ್ತಡವನ್ನು ಕಡಿಮೆ ಮಾಡಲು ಬಿಟಿಪಿ ಅಸ್ತ್ರಂ ಆ್ಯಪ್‌ನಲ್ಲಿ ಇ-ಆ್ಯಕ್ಸಿಡೆಂಟ್ ಮೂಲಕ ರಿಪೋರ್ಟ್ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಹಿಡಿಯುವ ಕೆಲಸವನ್ನು ಪರಿಣಾಮಕಾರಿಯಾಗಿ ಕೆಲಸ‌ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದೇ ಪ್ರಕರಣದಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ನಮ್ಮ ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಡ್ರಗ್ಸ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ಹೆಚ್ಚಿನ ಮಳೆಯಿಂದಾಗಿ ರಸ್ತೆ ಗುಂಡಿಗಳು ಬಿದ್ದಿವೆ. ಇದನ್ನು ಮುಚ್ಚುವ ಕೆಲಸವನ್ನು ಮಾಡಾಲಗುತ್ತಿದೆ.‌ ರಾಜಕೀಯ ಕಾರಣಕ್ಕಾಗಿ ದೂಷಿಸುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಹೋಂಡಾ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ ಸುನೀಲ್ ಕುಮಾರ್ ಮಿತ್ತಲ್, ಪ್ರಭು ನಾಗರಾಜ್ ಅವರು ಉಪಸ್ಥಿತರಿದ್ದರು.