ಕರ್ನಾಟಕ ಸಚಿವ ಸಂಪುಟವು ರಾಜ್ಯದ ಮಹಿಳಾ ನೌಕರರಿಗೆ ವರ್ಷಕ್ಕೆ 12 ದಿನಗಳ ವೇತನ ಸಹಿತ ಋತುಚಕ್ರ ರಜೆ ನೀಡುವ ಐತಿಹಾಸಿಕ ನೀತಿಗೆ ಅನುಮೋದನೆ ನೀಡಿದೆ. ಸರ್ಕಾರಿ, ಖಾಸಗಿ ಹಾಗೂ ಎಂಎನ್‌ಸಿ ಸೇರಿದಂತೆ ಎಲ್ಲಾ ವಲಯಗಳ ಮಹಿಳೆಯರಿಗೆ ಈ ನೀತಿ ಅನ್ವಯವಾಗಲಿದ್ದು, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ.

ಬೆಂಗಳೂರು (ಅ.09): ರಾಜ್ಯದ ಲಕ್ಷಾಂತರ ಮಹಿಳಾ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ. ಸಚಿವ ಸಂಪುಟವು ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಖಾರ್ಖಾನೆ, ಗಾರ್ಮೆಂಟ್ಸ್ ಸೇರಿ ವಿವಿಧೆಡೆ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ 'ವೇತನ ಸಹಿತ ಋತುಚಕ್ರ ರಜೆ ನೀತಿ' (Karnataka Govt menstrual Leave for women policy) ಜಾರಿಗೆ ಅನುಮೋದನೆ ನೀಡಿದೆ. ಈ ಐತಿಹಾಸಿಕ ನಿರ್ಧಾರದ ಪ್ರಕಾರ, ಮಹಿಳೆಯರು ತಮ್ಮ ಋತುಚಕ್ರದ ಅವಧಿಯಲ್ಲಿ ವರ್ಷಕ್ಕೆ 12 ದಿನಗಳವರೆಗೆ (ತಿಂಗಳಿಗೆ ಒಂದು ದಿನ) ರಜೆ ಪಡೆಯಲು ಅವಕಾಶ ಲಭ್ಯವಾಗಿದೆ.

ಎಲ್ಲೆಡೆ ಅನ್ವಯ: ಸರ್ಕಾರಿ, ಖಾಸಗಿ, ಎಂಎನ್‌ಸಿ ನೌಕರರಿಗೆ ರಜೆ

ಈ ಕುರಿತು ಮಾಹಿತಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, 'ಮಹಿಳೆಯರು ಸಮಾಜದಲ್ಲಿ ಸಾಕಷ್ಟು ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದರು.

ಸಚಿವ ಲಾಡ್ ಅವರ ಹೇಳಿಕೆಯ ಪ್ರಮುಖ ಅಂಶಗಳು ಹೀಗಿವೆ:

  • ರಜೆ ಪ್ರಮಾಣ: ಋತುಚಕ್ರದ ರಜೆಯೆಂದು ಮಹಿಳೆಯರಿಗೆ ವರ್ಷದಲ್ಲಿ ಒಟ್ಟು 12 ದಿನಗಳ ವೇತನ ಸಹಿತ ರಜೆ ನೀಡಲು ಸಂಪುಟ ಅನುಮೋದನೆ ನೀಡಿದೆ.
  • ಯಾರಾರಿಗೆ ಅನ್ವಯ: ಈ ನೀತಿಯು ಕೇವಲ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್‌ಗಳು ಮತ್ತು ಎಂಎನ್‌ಸಿ (MNC) ಕಂಪನಿಗಳು ಸೇರಿದಂತೆ ಎಲ್ಲಾ ವಲಯಗಳ ಮಹಿಳಾ ನೌಕರಿಗೂ ಅನ್ವಯಿಸುತ್ತದೆ.
  • ಒಂದು ವರ್ಷದಿಂದ ಜಾರಿ ಪ್ರಯತ್ನ: ಈ ಮಹತ್ವದ ನೀತಿಯನ್ನು ಜಾರಿಗೊಳಿಸಲು ಸರ್ಕಾರವು ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿತ್ತು ಮತ್ತು ಈಗ ಸಂಪುಟದಲ್ಲಿ ಇದಕ್ಕೆ ಅನುಮತಿ ಸಿಕ್ಕಿದೆ. ಮಹಿಳೆಯರು ತಮ್ಮ ಅಗತ್ಯದ ದಿನಗಳಲ್ಲಿ ಈ ರಜೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದ ಮಹಿಳಾ ಸಂಘಟನೆಗಳು

ಸರ್ಕಾರದ ಈ ನಿರ್ಧಾರವನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು ಮುಕ್ತವಾಗಿ ಸ್ವಾಗತಿಸಿದೆ. ಸಂಘದ ಅಧ್ಯಕ್ಷೆ ರೋಷಿನಿಗೌಡ ಅವರು ಪ್ರತಿಕ್ರಿಯೆ ನೀಡಿ, ‘ಇದು ಸರ್ಕಾರ ತೆಗೆದುಕೊಂಡಿರುವ ಬಹಳ ಐತಿಹಾಸಿಕ ತೀರ್ಮಾನ. ಈ ನಿರ್ಧಾರ ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ. ಸಂಘವು ಬಹಳ ವರ್ಷಗಳಿಂದ ಈ ಋತುಚಕ್ರ ರಜೆ ನೀತಿಗಾಗಿ ಹೋರಾಟ ನಡೆಸುತ್ತಾ ಬಂದಿತ್ತು, ಹಲವು ಸಭೆಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು. ’ನಮ್ಮ ಸಂಘಟನೆಯ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಮ್ಮ ಶುಭಾಶಯಗಳು ಎಂದು ರೋಷಿನಿಗೌಡ ತಿಳಿಸಿದರು.

ಈ ಮೂಲಕ ಕರ್ನಾಟಕ ರಾಜ್ಯವು ಬಿಹಾರ, ಒರಿಸ್ಸಾ, ಕೇರಳ ರಾಜ್ಯಗಳ ಮಾದರಿಯನ್ನು ಅನುಸರಿಸಿ ಮಹಿಳಾ ಪರವಾದ ರಜೆ ನೀತಿಯನ್ನು ಜಾರಿಗೆ ತಂದಿದೆ. ಇಡೀ ಮಹಿಳಾ ಸಮೂದಾಯ ಸರ್ಕಾರದ ಈ ಪ್ರಗತಿಪರ ತೀರ್ಮಾನವನ್ನು ಸ್ವಾಗತಿಸಿದೆ. ಈ ಹೊಸ ಕಾನೂನು ರಾಜ್ಯದ ಲಕ್ಷಾಂತರ ಮಹಿಳೆಯರ ಕೆಲಸದ ಪರಿಸರ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.