ರಾಜ್ಯದಲ್ಲಿ ಒಳಮೀಸಲಾತಿ ನಿಯಮಗಳ ಅನ್ವಯ ನ್ಯಾಯಬೆಲೆ ಅಂಗಡಿಗಳ ಹಂಚಿಕೆಗೆ ಸರ್ಕಾರ ಚಿಂತನೆ ನಡೆಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ನ್ಯಾಯಬೆಲೆ ಅಂಗಡಿಗಳ ಪೈಕಿ ಶೇ. 24ರಷ್ಟು ಮೀಸಲಿಡಲು ನಿರ್ಧರಿಸಲಾಗಿದೆ. ಹೊಸ ನಿಯಮಗಳ ಅನ್ವಯ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚಿನ ಪ್ರಾತಿನಿಧ್ಯ 

ಬೆಂಗಳೂರು (ಸೆ.12): ರಾಜ್ಯದಲ್ಲಿ ಇತ್ತೀಚೆಗೆ ಅನುಷ್ಠಾನಗೊಳಿಸಿರುವ ಒಳಮೀಸಲಾತಿ ನಿಯಮಗಳ ಅನ್ವಯವೇ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳ ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ‘ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2014’ಕ್ಕೆ ತಿದ್ದುಪಡಿ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಒಟ್ಟು ನ್ಯಾಯಬೆಲೆ ಅಂಗಡಿಗಳು ಎಷ್ತು?

ರಾಜ್ಯದಲ್ಲಿ ಒಟ್ಟು 20,473 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 988 ಪರಿಶಿಷ್ಟ ಜಾತಿ ಮತ್ತು 491 ಪರಿಶಿಷ್ಟ ಪಂಗಡ ಸಮುದಾಯದ ವ್ಯಕ್ತಿಗಳು ಮಾತ್ರ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರ ಹೊಂದಿದ್ದಾರೆ. ಅಂದರೆ ಒಟ್ಟಾರೆ ಪರಿಶಿಷ್ಟ ಜಾತಿ ಸಮುದಾಯದ ಪ್ರಾತಿನಿಧ್ಯದ ಪೈಕಿ ಶೇ.4.82 ಹಾಗೂ ಪರಿಶಿಷ್ಟ ಪಂಗಡ ಶೇ.2.36 ಇದೆ. ಆದರೆ, ವಾಸ್ತವವಾಗಿ ಕ್ರಮವಾಗಿ 3,480 ಹಾಗೂ 1,433 ಇರಬೇಕಿತ್ತು. ಆದ್ದರಿಂದ ಆಯಾ ಜಿಲ್ಲೆಗಳಲ್ಲಿರುವ ಒಟ್ಟು ನ್ಯಾಯಬೆಲೆ ಅಂಗಡಿಗಳ ಪೈಕಿ ಶೇ. 24ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ.

ಪರಿಶಿಷ್ಟ ಜಾತಿಗೆ ನ್ಯಾಯಬೆಲೆ ಅಂಗಡಿ ಮಂಜೂರು?

ಶೇ.40ಕ್ಕಿಂತ ಹೆಚ್ಚು ಹೊಂದಿರುವ ಗ್ರಾಮ ಅಥವಾ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಈ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂಬುದಕ್ಕೆ ಒಪ್ಪಿಗೆ ನೀಡಲಾಗಿದೆ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ಅದರಲ್ಲೂ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವ ಶೇ.17ರಷ್ಟು ಮೀಸಲಾತಿಯಲ್ಲಿ ಪ್ರವರ್ಗ-ಎ ಮತ್ತು ಬಿ ಸಮುದಾಯಗಳಿಗೆ ಕ್ರಮವಾಗಿ ತಲಾ ಶೇ.6 ಹಾಗೂ ಪ್ರವರ್ಗ-ಸಿ ಸಮುದಾಯಗಳಿಗೆ ಶೇ.5ರಷ್ಟು ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಗಳ ಹಂಚಿಕೆ ಸಂದರ್ಭದಲ್ಲಿ ಅನುಸರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 29,406 ಗ್ರಾಮಗಳಿದ್ದು, ಅದರಲ್ಲಿ ಪರಿಶಿಷ್ಟ ಜಾತಿ 2,518 ಮತ್ತು ಪಂಗಡಗಳ 1,128 ಗ್ರಾಮಗಳಲ್ಲಿ ಎಸ್ಸಿ,ಎಸ್ಟಿ ಸಮುದಾಯದವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿದೆ. ಹೀಗಾಗಿ ಇನ್ನು ಮುಂದೆ ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿ ವೇಳೆ ಮೀಸಲಾತಿ ನಿಯಮ ಪಾಲಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.