ಗಣೇಶ ವಿಸರ್ಜನೆ ವೇಳೆಯಲ್ಲಿ ಹಾಕಿದ್ದ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ 24ರ ಹರೆಯದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ರಾಯಚೂರು (ಸೆ.01) ಕರ್ನಾಟಕದ ಬಹುತೇಕ ಕಡೆ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆಯುತ್ತಿದೆ. ಬಹುತೇಕ ಗಣೇಶ ವಿಸರ್ಜನೆಯಲ್ಲಿ ಡಿಜೆ ಸೌಂಡ್ ಅತ್ಯಂತ ಪ್ರಮುಖವಾಗಿದೆ. ಆದರೆ ಕೆಲ ಗಣೇಶ ವಿಸರ್ಜನೆಯಲ್ಲಿ ಡಿಜೆ ಸೌಂಡ್ ಹಾಗೂ ಡ್ಯಾನ್ಸ್ ಯುವಕರ ಪ್ರಾಣಕ್ಕೆ ಕುತ್ತು ತಂದಿದೆ. ರಾಯಚೂರಿನ ತೀನ್ ಖಂದಿಲ್ ಸರ್ಕಲ್ ಬಳಿ ಅದ್ಧೂರಿಯಾಗಿ ಗಣೇಶ ಕೂರಿಸಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿತ್ತು. ಆದರೆ ವಿಸರ್ಜನೆ ವೇಳೆ ಅವಘಡ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ 24ರ ಹರೆಯದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಗೆಳೆಯರ ಜೊತೆ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ್ದ ಅಭಿಷೇಕ್
ರಾಯಚೂರು ನಗರದ ಮಂಗಳವಾರ ಪೇಟೆಯ ಯುವಕ ಅಭಿಷೇಕ್ (24) ಮೃತ ದುರ್ದೈವಿ. ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಲೇ ಮೆರವಣಿಗೆ ಸಾಗಿತ್ತು. ಈ ಡ್ಯಾನ್ಸ್‌ನಲ್ಲಿ ಅಭಿಷೇಕ್ ಕೂಡ ಉತ್ಸಾಹದಲ್ಲಿ ಪಾಲ್ಗೊಂಡಿದ್ದ. ಗೆಳೆಯರ ಜೊತೆಗೂಡಿ ಡಿಜೆ ಸೌಂಡ್ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದ. ಆದರೆ ರಾತ್ರಿಯಿಡಿ ಡ್ಯಾನ್ಸ್ ಮಾಡಿ ಸುಸ್ತಾಗಿದ್ದ. ಇತ್ತ ವಿಪರೀತ ಡಿಜೆ ಸೌಂಡ್ ಹಾಗೂ ಡ್ಯಾನ್ಸ್‌ನಿಂದ ಅಭಿಷೇಖ್ ಕುಸಿದು ಬಿದ್ದಿದ್ದ. ತಕ್ಷಣವೇ ಅಭಿಷೇಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಂಗಾಲಾದ ಪೋಷಕರು
ಖಾಸಗಿ ಆಸ್ಪತ್ರೆಯಲ್ಲಿ ಅಭಿಷೇಕ್‌ಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಯುವಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಗಣಪತಿ ಹಬ್ಬ: ಹಾರಿಕ ಮಂಜುನಾಥ್
ಗಣೇಶನ ಮುಂದೆ ಡ್ಯಾನ್ಸ್ ಮಾಡುತ್ತ ಹೃದಯಾಘಾತಕ್ಕೆ ಬಲಿ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಗಣೇಶನ ಕೂರಿಸಲಾಗಿತ್ತು. ವಿಸರ್ಜನೇ ವೇಳೆ ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ 40 ವರ್ಷದ ಲಕ್ಷ್ಮೀಪತಿ ಮೃತಪಟ್ಟಿದ್ದ. ಹೃದಯಾಘಾತದಿಂದ ಲಕ್ಷ್ಮೀಪತಿ ಮೃತಪಟ್ಟಿದ್ದಾನೆ. ಲಕ್ಷ್ಮೀಪತಿ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದ. ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದ. ತಕ್ಷಣವೇ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಗಣೇಶ ವಿಸರ್ಜನೆ ವೇಳೆ ಟ್ರಾಕ್ಟರ್‌ನಿಂದ ಬಿದ್ದು ವ್ಯಕ್ತಿ ಸಾವು
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರೆವಣಿಗೆ ಅದ್ದೂರಿಯಾಗಿ ನಡೆದಿತ್ತು. ಗ್ರಾಮಸ್ಥರು ಟ್ರಾಕ್ಟರ್ ಮೂಲಕ ಗಣೇಶ ವಿಸರ್ಜನೆ ಮೆರವಣಿಗೆ ಹೊರಟಿತ್ತು.ಮನೆ ಬಳಿ ಬಂದ ಗಣೇಶನ ಮೆರವಣಿಗೆಗೆ ಪೂಜೆ ಸಲ್ಲಿಸಲು 34 ವರ್ಷದ ಆಟೋರಾಜು ಟ್ರಾಕ್ಟರ್ ಹತ್ತಿದ್ದ. ಪೂಜೆ ಸಲ್ಲಿಸುತ್ತಾ ಟ್ರಾಕ್ಟರ್‌ನಿಂದ ಕೆಳಕ್ಕೆ ಬಿದ್ದಿದ್ದಾರೆ. ಚಿಕಿತ್ಸೆಗಾಗಿ ಹುಣಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಆಟೋರಾಜು ಮೃತಪಟ್ಟಿದ್ದಾನೆ. ಹೀಗಾಗಿ ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿದ ಗ್ರಾಮಸ್ಥರು ಚಿಕ್ಕ ಕೆರೆಯಲ್್ಲಿ ಗಣಪತಿ ವಿಸರ್ಜನೆ ಮಾಡಿದ್ದಾರೆ.
