ಕರ್ನಾಟಕದಲ್ಲಿ ಶೇ. 87ರಷ್ಟು ಅರಣ್ಯವಾಸಿಗಳ ಭೂ ಹಕ್ಕು ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 20,000ಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸರ್ಕಾರದ ನಿಯಮಬಾಹಿರ ನಡೆಯಿಂದಾಗಿ ಸಾಗುವಳಿದಾರರು ತಮ್ಮನ್ನು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ.
ಉತ್ತರ ಕನ್ನಡ (ಅ.4) ರಾಜ್ಯದಲ್ಲಿ ಅರಣ್ಯವಾಸಿಗಳ ಶೇ. 87ರಷ್ಟು ಭೂ ಒತ್ತುವರಿ ಸಾಗುವಳಿಯ ಹಕ್ಕಿನ ಅರ್ಜಿಗಳು ತಿರಸ್ಕಾರಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಅಕ್ರೋಶ ವ್ಯಕ್ತವಾಗಿದ್ದು, ಅರಣ್ಯ ಸಾಗುವಳಿದಾರರರಿಂದ 20 ಸಾವಿರಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳನ್ನು ಅಭಿಯಾನ ರೂಪದಲ್ಲಿ ಸಲ್ಲಿಸಲಾಗಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಅರಣ್ಯ ಭೂ ಒತ್ತುವರಿದಾರರು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೇಲ್ಮನವಿ ಅರ್ಜಿ ಅಭಿಯಾನ ಹಮ್ಮಿಕೊಂಡಿದ್ದು, ಸರ್ಕಾರದ ವಿರುದ್ಧ ಇದೇ 14 ರಂದು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 2,94,489 ಅರ್ಜಿಗಳು ದಾಖಲಾಗಿದ್ದು, ಇವುಗಳಲ್ಲಿ 16,326 ಅರ್ಜಿಗಳಿಗೆ ಮಾತ್ರ ಸಾಗುವಳಿ ಹಕ್ಕುಪತ್ರ ನೀಡಲಾಗಿದೆ. ಉಳಿದ ಶೇ. 87.77 ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನು ರಾಜ್ಯದಲ್ಲಿಯೇ ಶಿವಮೊಗ್ಗದಲ್ಲಿ 92 ಸಾವಿರ ಅರ್ಜಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳು ತಿರಸ್ಕಾರಗೊಂಡಿದೆ. ರಾಜ್ಯ ಸರ್ಕಾರ ಅರ್ಜಿದಾರರ ಅರ್ಜಿಯನ್ನು ಪುನರ್ ಪರಿಶೀಲನೆ ಮಾಡದೇ ನಿಯಮಬಾಹಿರವಾಗಿ ಕೇಂದ್ರ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂಬುದು ಅರಣ್ಯ ಭೂ ಹಕ್ಕು ಹೋರಾಟಗಾರರು ದೂರಿದ್ದಾರೆ.
ಅಂದಹಾಗೆ, ಬಹುತೇಕ ಅರ್ಜಿದಾರರು ತಂದೆ ಹಾಗೂ ಪೂರ್ವಜರ ಕಾಲದಿಂದಲೂ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅತ್ಯಲ್ಪ ಭೂ ಹಿಡುವಳಿದಾರರಾಗಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಂತೆ ಇವರಿಗೆ ಭೂ ಸಾಗುವಳಿ ಹಕ್ಕುಗಳನ್ನು ನೀಡಬೇಕಾಗಿದ್ರೂ, ಅರ್ಜಿಗಳನ್ನು ಪರಾಮರ್ಶಿಸದೇ ತಮ್ಮ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹೀಗಾಗಿ ನಮ್ಮನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಒಕ್ಕಲೆಬ್ಬಿಸಿದರೆ ಬೀದಿಗೆ ಬೀಳುವ ಪರಿಸ್ಥಿತಿಯಿದೆ ಎಂಬುದು ಅರಣ್ಯವಾಸಿಗಳ ಅಭಿಪ್ರಾಯ. ಹೀಗಾಗಿ ಅರಣ್ಯ ಹಕ್ಕು ಕಾಯ್ದೆ ನಿಯಮದಂತೆ ಹಾಗೂ ಹೈಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು, ತಮಗೆ ತಮ್ಮ ಜೀವನಕ್ಕಾಗಿ ಭೂಮಿ ಹಕ್ಕು ನೀಡಬೇಕು ಎಂಬುದು ಅರಣ್ಯಭೂ ಹಿಡುವಳಿದಾರರ ಒತ್ತಾಯ.
ಒಟ್ಟಿನಲ್ಲಿ ಸದ್ಯ ಅ.14 ರಂದು ಹೈಕೋರ್ಟ್‌ನಲ್ಲಿ ಅರಣ್ಯ ಭೂ ಒತ್ತುವರಿದಾರರ ಅರ್ಜಿಗಳು ವಿಚಾರಣೆ ನಡೆಯಲಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ನಿಯಮ ಉಲ್ಲಂಘನೆ ವಿರುದ್ಧ 20 ಸಾವಿರಕ್ಕೂ ಹೆಚ್ಚು ಜನರು ಅಭಿಯಾನದ ಮೂಲಕ ಮೇಲ್ಮನವಿ ಸಲ್ಲಿಕೆ ಮಾಡುತಿದ್ದು, ಇನ್ನೂ ಅರ್ಜಿಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ, ಸದ್ಯ ಜೀವನಕ್ಕಾಗಿ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡ್ತಿರುವ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಭೀತಿ ಪ್ರಾರಂಭವಾಗಿರೋದಂತೂ ಸತ್ಯ
