ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹಿಂದಿನ ಸರ್ಕಾರಕ್ಕಿಂತ ಹಲವು ಇಲಾಖೆಗಳಲ್ಲಿ ಕಮಿಷನ್ ದರ ದುಪ್ಪಟ್ಟಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಸುಮಾರು 33 ಸಾವಿರ ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಸಿದೆ.

ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ಹೊರ ಹಾಕಿದೆ. ಹಲವು ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟಾಗಿದೆ ಎಂದು ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ಅಸೋಸಿಯೇಷನ್ ತನ್ನ ಪತ್ರದಲ್ಲಿ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಗುತ್ತಿಗೆದಾರರಿಗೆ ಸರಕಾರದಿಂದ 33 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಪ್ರತಿಯೊಂದು ಸಭೆಯಲ್ಲೂ ನಮ್ಮನ್ನು ಸಮಾಧಾನಪಡಿಸಿ, ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ನಾವು ನಿಮಗೆ ಗೌರವ ಕೊಟ್ಟು, ನಿಮ್ಮ ಭರವಸೆಯಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಫಲಿತಾಂಶ ಕಾಣಲಿಲ್ಲ” ಎಂದು ತಿಳಿಸಿದೆ.

ಪತ್ರದಲ್ಲಿ ಗುತ್ತಿಗೆದಾರರು ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಕೆಲ ಪ್ರಮುಖ ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರದ ಅವಧಿಗಿಂತ ಇಂದಿನ ಸರ್ಕಾರದಲ್ಲಿ ಹೆಚ್ಚಾಗಿದೆ. ಅಸೋಸಿಯೇಷನ್ ಈ ಪರಿಸ್ಥಿತಿಯನ್ನು ತೀವ್ರವಾಗಿ ಖಂಡಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಗುತ್ತಿಗೆದಾರರು ಇನ್ನೂ ವಿವರಿಸಿರುವಂತೆ, ಬಾಕಿ ಹಣ ಬಿಡುಗಡೆ ಆಗದೆ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ತಮ್ಮ ಕಾರ್ಯಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ. ಸರ್ಕಾರದ ಬಾಕಿ ಹಣ ಪಾವತಿಯಾಗದೇ, ಬ್ಯಾಂಕುಗಳ ಸಾಲದ ಒತ್ತಡ, ಉದ್ಯೋಗಿಗಳ ವೇತನ ಸಮಸ್ಯೆ, ಸಾಮಗ್ರಿಗಳ ಪೂರೈಕೆ ತೊಂದರೆ ಇವೆಲ್ಲವೂ ಗುತ್ತಿಗೆದಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ.

ಅಸೋಸಿಯೇಷನ್ ಪತ್ರದಲ್ಲಿ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿ, ನಾವು ಯಾವ ಸರ್ಕಾರದ ವಿರುದ್ಧ ಶತ್ರುತ್ವವಿಲ್ಲ. ಆದರೆ, ನಮ್ಮ ಬದುಕು, ನಮ್ಮ ಉದ್ಯಮ, ನಮ್ಮ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ನಿಮ್ಮ ಸರ್ಕಾರದಿಂದಲೂ ಯಾವುದೇ ಧನಾತ್ಮಕ ಸ್ಪಂದನೆ ದೊರೆಯದೇ ಇರುವುದರಿಂದ ನಿರಾಶೆ ಹೆಚ್ಚಾಗಿದೆ ಎಂದು ಕಹಿ ಮನಸ್ಸು ಹಂಚಿಕೊಂಡಿದೆ.

ಗುತ್ತಿಗೆದಾರರು ತಮ್ಮ ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ, ಹಾಗೂ ಕಮಿಷನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಗುತ್ತಿಗೆದಾರರು ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸೂಚಿಸಿದ್ದಾರೆ.

ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಆರೋಪಗಳೇನು

1) ಕಾಮಗಾರಿಗಳ ಕೈಗೊಳ್ಳುವ 8 ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಆಗಿಲ್ಲ

  • ಸಂಬಂಧಿಸಿದ ಎಲ್ಲಾ ಇಲಾಖಾ ಸಚಿವರು, ಸರ್ಕಾರದ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ
  • ಜೇಷ್ಠತೆ, ಪಾರದರ್ಶಕತೆ ಕಾಯ್ದೆ ಕಾಪಾಡಿಲ್ಲ
  • ಅವರದ್ದೆ ಫಾರ್ಮುಲಾಗಳನ್ನ ತಯಾರಿಸಿಕೊಂಡು ಸ್ಪೆಷಲ್ ಎಓಸಿ ರೂಪದಲ್ಲಿ ಬಾಕಿ ಹಣ 3 ತಿಂಗಳಿಗೊಮ್ಮೆ 15%-20% ಬಿಡುಗಡೆ ಮಾಡುತ್ತಿದ್ದಾರೆ

2) 2017-18, 2018-19, 2019-20& 2020-21 ಜಿ.ಎಸ್.ಟಿ.ಯ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವ ಬಗ್ಗೆ

  • ತಾವುಗಳು 2 ವರ್ಷದಿಂದ ಹಲವಾರು ಸಾರಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿರವರಿಗೆ ತಿಳಿಸಿದರು ಸಹ ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ.

3. ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯವರು ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳನ್ನು ಪಾವತಿಸುವ ಸಮಯದಲ್ಲಿ, ಎಂ.ಡಿ.ಪಿ.ಸಲ್ಲಿಸದ ಸಂದರ್ಭದಲ್ಲಿ 5 ಪಟ್ಟು ರಾಜಧನ (ರಾಯಲ್ಟಿ) ದಂಡವನ್ನು ವಿಧಿಸುತ್ತಿದ್ದಾರೆ.

  • ರಾಯಲ್ಟಿ ಮತ್ತು ಎಂ.ಡಿ.ಪಿ. ವ್ಯತ್ಯಾಸದ ಮೊತ್ತವನ್ನು ಸರ್ಕಾರವೆ ಭರಿಸುತ್ತದೆ ಎಂದು ಹಿಂದಿನ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಚಿವರ ಸಭೆಯಲ್ಲಿ ತಿಳಿಸಿರುತ್ತಾರೆ.
  • ಆದರೆ ಇದುವರೆವಿಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ .
  • ಆದರೂ ಸದರಿ ಇಲಾಖೆಯವರು ಗುತ್ತಿಗೆದಾರರು ಬಳಸುವ ವಾಹನಗಳಿಗೆ ಅವೈಜ್ಞಾನಿಕ ದಂಡವನ್ನು ವಿಧಿಸುತ್ತಿದ್ದಾರೆ.

4. ಮಾನ್ಯರೇ, ನಿರ್ಮಿತಿ ಕೇಂದ್ರ ಕೆ.ಆರ್.ಐ.ಡಿ.ಎಲ್. (Land Army) ಹಾಗೂ ಇತರೇ ಸಂಸ್ಥೆಗಳು ಜನಪ್ರತಿನಿಧಿಗಳ ಅನುಯಾಯಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತಾರೆ.

  • ಕೆಲಸ ತೆಗೆದುಕೊಂಡಿರುವ ಅನುಯಾಯಿಗಳು, ಕಾರ್ಯಕರ್ತರು ಅದೇ ಕಾಮಗಾರಿಯನ್ನು ಧೃಡೀಕೃತ ನೋಂದಾಯಿತ ಹಿರಿಯ ಗುತ್ತಿಗೆದಾರರಿಗೆ % ಹಣವನ್ನು ತೆಗೆದುಕೊಂಡು ಕಾಮಗಾರಿಗಳನ್ನು ಕೊಡುತ್ತಿದ್ದಾರೆ.
  • ಹಿರಿಯ ಗುತ್ತಿಗೆದಾರರಾದ ನಾವುಗಳು ಕಾರ್ಯಕರ್ತರಿಂದ ಮರುಗುತ್ತಿಗೆಯನ್ನು ಪಡೆಯುವುದು, ಸದರಿ ಕಾಮಗಾರಿಗಳ ಗುಣಮಟ್ಟವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿರುತ್ತದೆ.

5. ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿದ್ದಾರೆ..

  • ಪರಿವರ್ತಿಸಿ ತಮಗೆ ಬೇಕಾದ ಬಲಾಡ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡ‌ರ್ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ
  • ಈ ವಿಚಾರವಾಗಿ ರಾಜ್ಯ ಸಂಘವು ಪದಾಧಿಕಾರಿಗಳ ಸಭೆನಡೆಸಲು ಹಲವಾರು ಸಾರಿ ಪತ್ರದ ಮುಖೇನ ಮತ್ತು ಮೌಕಿಕವಾಗಿ ತಿಳಿಸಿದರು ಸಹ ಸಂಬಂಧಪಟ್ಟಸಚಿವರು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸುತ್ತಿಲ್ಲ.

ಯಾವ ಇಲಾಖೆಯಲ್ಲಿ ಎಷ್ಟು ಕೋಟಿ ಬಾಕಿ...?

  • ಜಲ ಸಂಪನ್ಮೂಲ - 12000
  • ನಗರಾಭಿವೃದ್ಧಿ- 1200
  • ವಸತಿ - 900
  • ಲೋಕೋಪಯೋಗಿ- 9000
  • ಪಂಚಾಯತ್ ರಾಜ್ - 3600
  • ಸಣ್ಣ ನೀರಾವರಿ - 32,000
  • KRIDL - 3000
  • BBMP- 1800
  • ಕಾರ್ಮಿಕ ಇಲಾಖೆ - 800
  • ಪೌರಾಡಳಿತ ಇಲಾಖೆ - 600
  • ವಕ್ಫ್ - 600