ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ಅ.18 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸಮೀಕ್ಷೆಯಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರು (ಅ.07): ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ, ಸರ್ಕಾರಿ ಮತ್ತು ಅನುದಾನಿತ (Aided) ಶಾಲೆಗಳ ವಿದ್ಯಾರ್ಥಿಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘದಿಂದ ಸಿಎಂ ಭೇಟಿ ಮಾಡಿ ಸರ್ಕಾರದ ಜಾತಿ ಸಮೀಕ್ಷೆ ಮತ್ತು ಶಾಲೆಗೆ ಹಾಜರಾಗಿ ಪಾಠ ಬೋಧನೆ ಮಾಡುವುದು ಎರಡೂ ಕೆಲಸಗಳು ಹೊರೆ ಆಗಲಿವೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಒಂದು ಕೆಲಸಕ್ಕೆ ನಿಯೋಜನೆ ಮಾಡುವಂತೆ ಮನವಿ ಸಲ್ಲಿಕೆ ಮಾಡಿದ್ದರು. ಶಿಕ್ಷಕರ ಸಂಘದ ಮನವಿ ಸ್ವೀಕರಿಸಿದ ಬೆನ್ನಲ್ಲಿಯೇ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ದಸರಾ ರಜೆಯ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಮೀಕ್ಷೆ ನಿರೀಕ್ಷೆಯಷ್ಟು ಪೂರ್ಣಗೊಂಡಿಲ್ಲ:

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯವು ಸೆಪ್ಟೆಂಬರ್ 22 ರಿಂದ ಆರಂಭಗೊಂಡಿತ್ತು. ಇದನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿರೀಕ್ಷಿಸಿದಷ್ಟು ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಜ್ಯದಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕಂತೆ ಸರ್ವೇ ಪೂರ್ಣಗೊಂಡಿಲ್ಲ. ಕೊಪ್ಪಳದಂತಹ ಕೆಲವು ಜಿಲ್ಲೆಗಳಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಶೇ. 60ರಷ್ಟು ಮಾತ್ರ ಆಗಿದೆ. ಅಕ್ಟೋಬರ್ 7 ಕೊನೆಯ ದಿನವಾಗಿದ್ದರೂ, ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಸರ್ವೇ ಪೂರ್ಣವಾಗುವುದು ಅಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಶಿಕ್ಷಕರ ಮನವಿ: 10 ದಿನ ಹೆಚ್ಚುವರಿ ಕಾಲಾವಕಾಶ:

ಸಮೀಕ್ಷಾ ಕಾರ್ಯದಲ್ಲಿ ರಾಜ್ಯದಾದ್ಯಂತ ಸುಮಾರು 1.20 ಲಕ್ಷ ಶಿಕ್ಷಕರು ಹಾಗೂ 40 ಸಾವಿರ ಇತರ ಸಿಬ್ಬಂದಿ ಸೇರಿ ಒಟ್ಟು 1.60 ಲಕ್ಷ ಜನರು ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರ ಸಂಘಟನೆಗಳು ಸಮೀಕ್ಷೆ ಪೂರ್ಣಗೊಳಿಸಲು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು, ಶಾಶ್ವತ ಹಿಂದುಳಿದ ಆಯೋಗದ ಜೊತೆ ಚರ್ಚಿಸಿ ಶಿಕ್ಷಣ ಇಲಾಖೆಯ ಮೂಲಕ ರಜೆ ವಿಸ್ತರಿಸಿ ಆದೇಶ ನೀಡಿದೆ. ನಾಳೆಯಿಂದ (ಅ.08) ಆರಂಭಗೊಂಡು ಅಕ್ಟೋಬರ್ 18 ರವರೆಗೆ (ಸುಮಾರು 6 ವರ್ಕಿಂಗ್ ಡೇಸ್) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಮುಂದುವರೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಶಿಕ್ಷಕರಿಗೆ ವಿನಾಯಿತಿ:

ಸಮೀಕ್ಷೆ ನಡೆಯುತ್ತಿರುವ ಕಾರಣ ರಜೆ ವಿಸ್ತರಣೆ ಮಾಡಲಾಗಿದೆ. ಆದರೆ, ಪ್ರಸ್ತುತ ದ್ವಿತೀಯ ಪಿಯುಸಿ ಮದ್ಯಂತರ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಈ ಶಿಕ್ಷಕರು ಪರೀಕ್ಷಾ ಕರ್ತವ್ಯಗಳನ್ನು ಮುಂದುವರೆಸಲಿದ್ದಾರೆ. ಉಳಿದ ಶಿಕ್ಷಕರು ರಜೆ ಅವಧಿಯಲ್ಲೂ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ನಿರ್ಧಾರದಿಂದ ಸಮೀಕ್ಷೆ ಕಾರ್ಯಕ್ಕೆ ವೇಗ ದೊರೆಯುವ ನಿರೀಕ್ಷೆಯಿದೆ.