R Ashoka on Siddaramaiah government: ಸಿದ್ದರಾಮಯ್ಯ ಸರ್ಕಾರ ಗೂಂಡಾ ಶೈಲಿಯ ಆಡಳಿತ, ಜಾತಿಗಣತಿ ನಾಟಕದ ಮೂಲಕ ತನ್ನ ವೈಫಲ್ಯ ಮುಚ್ಚಲು ಯತ್ನಿಸಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು. ಉದ್ಯಮಿಗಳಿಗೆ ಡಿಸಿಎಂ ಧಮ್ಕಿ, ನಾರಾಯಣಮೂರ್ತಿ ಕುಟುಂಬದ ಬಗ್ಗೆ ರೌಡಿಗಳಂತೆ ಮಾತನಾಡಿದ್ದಾರೆ
ಹಾಸನ(ಅ.21): ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೂಂಡಾ ಶೈಲಿಯಲ್ಲಿ ಆಡಳಿತ ನಡೆಸುತ್ತಿದ್ದು, ಜಾತಿಗಣತಿ ನಾಟಕದಿಂದ ತಮ್ಮ ಸರ್ಕಾರದ ವೈಫಲ್ಯ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಜಾತಿಗಣತಿ ಹೆಸರಿನಲ್ಲಿ ಸರ್ಕಾರ ಜಾತಿ ಆಧಾರಿತ ರಾಜಕೀಯಕ್ಕೆ ಇಂಧನ ಹಾಕುತ್ತಿದೆ. ಹೈಕೋರ್ಟ್ ಸ್ಪಷ್ಟವಾಗಿ ಹೇಳಿದರೂ, ದಮ್ಕಿ ಹಾಕಿ ಸಮೀಕ್ಷೆ ಮಾಡಿಸುತ್ತಿದ್ದಾರೆ. ಇದು ಸಂವಿಧಾನ ಬಾಹಿರ ನಡೆ. 15 ದಿನಗಳಲ್ಲಿ ಗಣತಿ ಮುಗಿಸುತ್ತೇನೆ ಎಂದು ಹಠ ಹಿಡಿದಿದ್ದ ಸಿಎಂ ಈಗ 3ನೇ ಬಾರಿಗೆ ಅವಧಿ ವಿಸ್ತರಣೆ ಮಾಡಿದ್ದಾರೆ. ಇದು ಸರ್ಕಾರದ ವೈಫಲ್ಯದ ಕನ್ನಡಿ ಎಂದರು.
ಸುಧಾಮೂರ್ತಿ ದಂಪತಿ ಯಾರದ್ದಾದರೂ ಹಣ ತಿಂದಿದ್ದಾರಾ?
ನಾರಾಯಣಮೂರ್ತಿ ಕುಟುಂಬದ ಮಾಹಿತಿಯನ್ನು ಬಹಿರಂಗಗೊಳಿಸಿರುವ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡ ಅವರು, ಮೂರ್ತಿ ಅವರು ಯಾರದ್ದಾದರೂ ಹಣ ತಿಂದಿದ್ದಾರಾ? ಅವರಿಗೆ ಬೆದರಿಕೆ ಹಾಕಲು ಇದೇನು ರೌಡಿಗಳ ಸರ್ಕಾರವೇ? ನೀವು ಔಟ್‌ಗೋಯಿಂಗ್ ಸಿಎಂ ಆಗಿದ್ದು, ಕೇಂದ್ರದಲ್ಲಿ ಹೊಸ ಸಮೀಕ್ಷೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ₹165 ಕೋಟಿ ಹಣ ವ್ಯರ್ಥವಾಗಿದ್ದು, ಇನ್ನೂ ₹450 ಕೋಟಿ ತೆರಿಗೆ ಹಣ ವ್ಯಯ ಮಾಡುತ್ತಿದ್ದಾರೆ. ಗೌಪ್ಯತೆ ಕಾಪಾಡಬೇಕಾದ ಮಾಹಿತಿಯೇ ಸೋರಿಕೆಯಾಗಿದೆ ಎಂದರು.
ಉದ್ಯಮಿಗಳಿಗೆ ಡಿಕೆ ಶಿವಕುಮಾರ ಧಮ್ಕಿ:
ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ. ಇವರು ಕಾಂಗ್ರೆಸ್‌ನಿಂದ ಸಹಾಯ ಕೇಳಿಲ್ಲ. ಬೆಂಗಳೂರಿನ ಗುಂಡಿ ಮುಚ್ಚಲಿಕ್ಕೂ ಹಣ ಇಲ್ಲ ಅಂದ್ರೆ ಪಾಪರ್ ಆಗಿದ್ದೀರಾ? ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ ಎಂದು ಆರೋಪಿಸಿದರು.
