ರಾಜ್ಯದಾದ್ಯಂತ 22 ವಿಧಾನಸಭಾ ಕ್ಷೇತ್ರಗಳಲ್ಲಿ 40 ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿಗೆ 398 ಕೋಟಿ ರೂ. ಅನುದಾನವನ್ನು ನೀಡುವುದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆಯನ್ನು ಸೂಚಿಸಲಾಗಿದೆ. ವಿಜಯಪುರ ವಿಮಾನ ನಿಲ್ದಾಣ, ಆರೋಗ್ಯ, ಮತ್ತು ರಸ್ತೆ ಸುಧಾರಣೆಗೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು (ಸೆ.11): ರಾಜ್ಯದಾದ್ಯಂತ 22 ವಿಧಾನಸಭಾ ಕ್ಷೇತ್ರಗಳಲ್ಲಿ 40 ಅಲ್ಪಸಂಖ್ಯಾತರು ವಾಸಿಸುತ್ತಿರುವ ಅಲ್ಪಸಂಖ್ಯಾತರ ಕಾಲನಿಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಒಟ್ಟು ₹398 ಕೋಟಿ ಅನುದಾನವನ್ನು ನೀಡಲು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ, ಆರೋಗ್ಯ ಕ್ಷೇತ್ರದ ಸುಧಾರಣೆ, ಮತ್ತು ರಸ್ತೆ ಸಂಪರ್ಕ ಸುಧಾರಣೆಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ಆದ್ಯತೆ
ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳ ಅತಿ ಹಿಂದುಳಿದ 40 ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಒಟ್ಟು ₹398 ಕೋಟಿ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. 22 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಮೂಲಸೌಕರ್ಯ ವಲಯಕ್ಕೆ ಒತ್ತು:
ಯಲ್ಲಾಪುರ ಸೇತುವೆ ನಿರ್ಮಾಣ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಮತ್ತು ಹೆಗ್ಗಾರ ಗ್ರಾಮಗಳನ್ನು ಸಂಪರ್ಕಿಸುವ ಗಂಗಾವಳಿ ನದಿಗೆ ₹35 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ವಿಜಯಪುರ ವಿಮಾನ ನಿಲ್ದಾಣ: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಗಳ ಪರಿಷ್ಕೃತ ಅಂದಾಜು ಮೊತ್ತವಾದ ₹618.75 ಕೋಟಿಗೆ ಅನುಮೋದನೆ ನೀಡುವ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವರದಿ ಪಡೆದುಕೊಳ್ಳಲು ಸಂಪುಟ ನಿರ್ಧರಿಸಿದೆ.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆದ್ಯತೆ
ವಿಕ್ಟೋರಿಯಾ ಆಸ್ಪತ್ರೆ: ಹೊಸ ವಾರ್ಡ್‌ಗಳಿಗೆ ಪೀಠೋಪಕರಣ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್‌ಗಳಿಗೆ ₹20.05 ಕೋಟಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
ಆಸ್ಪತ್ರೆಗಳ ನವೀಕರಣ: ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ, ಮತ್ತು ಸವದತ್ತಿ ತಾಲ್ಲೂಕು ಆಸ್ಪತ್ರೆಗಳ ಜೊತೆಗೆ ದಾವಣಗೆರೆ ಮತ್ತು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗಳ ನವೀಕರಣಕ್ಕೆ ₹542 ಕೋಟಿ ಅನುಮೋದನೆ ನೀಡಲಾಗಿದೆ.
ಸಂಚಾರಿ ಆರೋಗ್ಯ ಘಟಕಗಳ ಉನ್ನತೀಕರಣ: ಸಂಚಾರಿ ಆರೋಗ್ಯ ಘಟಕಗಳನ್ನು ದುರಸ್ತಿಗೊಳಿಸಿ, ಹೊಸ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲು ₹12.25 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ. ಈ ವಾಹನಗಳ ವಾರ್ಷಿಕ ನಿರ್ವಹಣೆಗೆ ₹14.70 ಕೋಟಿ ಅನುಮೋದನೆ ದೊರೆತಿದೆ.
ಇತರ ಪ್ರಮುಖ ತೀರ್ಮಾನಗಳು
- PM KUSUM-B ಯೋಜನೆ: PM KUSUM-B ಯೋಜನೆಯಡಿ ರೈತರ ಪಂಪ್‌ಸೆಟ್‌ಗಳ ವೆಚ್ಚದ ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರದಿಂದ ಸಹಾಯಧನವಾಗಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.
- ಬಯೋಡೀಸೆಲ್ ಮಿಶ್ರಣ: ಕರ್ನಾಟಕ ರಾಜ್ಯದಲ್ಲಿ ಬಯೋಡೀಸೆಲ್ ಅನ್ನು ಹೈಸ್ಪೀಡ್ ಡೀಸೆಲ್‌ನೊಂದಿಗೆ ಮಿಶ್ರಣ ಮಾಡುವ ಪರವಾನಗಿ ಆದೇಶ 2025ಕ್ಕೆ ಅನುಮೋದನೆ ನೀಡಲಾಗಿದೆ.
- ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಗಳ ಆಹ್ವಾನ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನಿಷ್ಠ 9 ಮತ್ತು ಗರಿಷ್ಠ 13 ಅತಿಥಿಗಳನ್ನು ಆಹ್ವಾನಿಸುವ ಮಾರ್ಗಸೂಚಿಯನ್ನು ಬದಲಾಯಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಮಹತ್ವದ ಆಧಾರದ ಮೇಲೆ ಹೆಚ್ಚಿನ ಅತಿಥಿಗಳನ್ನು ಆಹ್ವಾನಿಸಲು ಅಧಿಕಾರ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
