ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಹಲವು ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ರಾಜಣ್ಣ ಅವರನ್ನು ಪುನಃ ರಾಜ್ಯದ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ತುಮಕೂರು (ಆ.31): ಕರ್ನಾಟಕ ರಾಜಕೀಯದಲ್ಲಿ ಹಿಂದುಳಿದ ಮತ್ತು ದಲಿತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ವಿವಿಧ ಮಠಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ಕೈಬಿಟ್ಟಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ಮಠಾಧೀಶರ ನಡೆ:
ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ 15ಕ್ಕೂ ಹೆಚ್ಚು ಮಠಾಧೀಶರ ನಿಯೋಗವು ಅವರಿಗೆ ನೈತಿಕ ಬೆಂಬಲ ನೀಡಿದೆ. ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, 'ಒಬ್ಬ ಹಿಂದುಳಿದ ಹಾಗೂ ದಲಿತ ನಾಯಕನನ್ನು ಸಣ್ಣ ಕಾರಣಕ್ಕೆ ಸಂಪುಟದಿಂದ ಕೈಬಿಟ್ಟಿರುವುದು ಸಮಂಜಸವಲ್ಲ. ಸಮಾಜಕ್ಕಾಗಿ ಸಾಕಷ್ಟು ಕೆಲಸ ಮಾಡಿರುವ ರಾಜಣ್ಣ ಅವರಿಗೆ ಈ ರೀತಿ ಶಿಕ್ಷೆಯಾಗಬಾರದಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಪುಟದಿಂದ ಕೈಬಿಡುವಂತಹ ತಪ್ಪು ಅವರೇನೂ ಮಾಡಿಲ್ಲ:
ಸಚಿವ ಸಂಪುಟದಿಂದ ಅವರನ್ನು ಕೈಬಿಟ್ಟ ಬಗ್ಗೆ ರಾಜಣ್ಣರನ್ನು ಭೇಟಿಯಾಗಿ ಮಾತನಾಡಿದ್ದೇವೆ ಅವರು ಏನು ಹೇಳಿಲ್ಲ. ನಾವು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡಿದ್ದೇವೆ. ರಾಜಣ್ಣ ಅವರ ಅಭಿಪ್ರಾಯವು ಹಾಗೆ ಇದೆ, ರಾಜ್ಯದಲ್ಲಿ ಹಿಂದುಳಿದ, ದಲಿತ ನಾಯಕನನ್ನು ರಾಜಕೀಯ ವಾಗಿ ತುಳಿಯುವ ಪ್ರಯತ್ನ ಆಗುತ್ತಿದೆ. ಅವರು ಮಡಿರುವ ಸಣ್ಣ ತಪ್ಪಿಗೆ ಈ ರೀತಿ ಶಿಕ್ಷೆ ಆಗಬಾರದಾಗಿತ್ತು. ನಾವು ಕೂಡ ಯೋಚನೆ ಮಾಡ್ತಿದೀವಿ, ಒಬ್ಬ ಹಿಂದುಳಿದ ಹಾಗೂ ದಲಿತ ಸಮಾಜದ ಮುಖಂಡನನ್ನು ಒಂದು ಸಣ್ಣ ವಿಚಾರಕ್ಕೆ ಸಂಪುಟದಿಂದ ಕೈಬಿಡಲಾಗಿದೆ. ಸಚಿವ ಸಂಪುಟದಿಂದ ಕೈ ಬಿಡುವ ಕೃತ್ಯ ಏನು ಅವರು ಮಾಡಿಲ್ಲ. ಆ ದೃಷ್ಟಿಯಲ್ಲಿ ಪಕ್ಷದ ಗಮನಕ್ಕೆ ತರಬೇಕಾಗಿರುವಂಥದ್ದಾಗಿದೆ. ಇದು ಒಂದು ಸಾಮಾಜಿಕ ಕಳಕಳಿಯಾಗಿದೆ. ನಾವೆಲ್ಲಾ ಮಠಾಧೀಶರು ಕೂಡ ರಾಜಣ್ಣ ಅವರು ಬೇಕು, ರಾಜಣ್ಣ ರಾಜಕೀಯದಲ್ಲಿ ಇರಬೇಕು ಅಂತ ಹೈಕಮಾಂಡ್ ಮುಂದೆ ಹೇಳುತ್ತೇವೆ ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಖರ್ಗೆ, ರಾಹುಲ್ ಗಾಂಧಿ ಭೇಟಿಗೆ ಸಿದ್ಧತೆ:
ನಾವು ಮಠಾಧೀಶರೆಲ್ಲರೂ ತೀರ್ಮಾನ ಮಾಡಿ, ರಾಜಣ್ಣ ಅವರನ್ನು ಪುನಃ ಸಚೊವ ಸಂಪುಟ್ಟಕ್ಕೆ ಸೇರಿಸಿಕೊಳ್ಳಬೇಕು ಎಂಬ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್‌ನ ಗಮನಕ್ಕೆ ತರಲು ಸದ್ಯದಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದೇವೆ. 'ರಾಜಣ್ಣ ಅವರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾಧ್ಯಮಗಳ ಮೂಲಕ ನಮಗೆ ತಿಳಿದು ಬಂದಿದೆ. ಸಣ್ಣ ತಪ್ಪಿಗೆ ಅವರನ್ನು ಕೈಬಿಟ್ಟಿರುವ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ' ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ರಾಜಣ್ಣ ಮನೆಗೆ ಭೇಟಿ ನೀಡಿದ ಸ್ವಾಮೀಜಿಗಳು
- ದಾವಣಗೆರೆಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು
- ಚಿತ್ರದುರ್ಗದ ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು,
- ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು
- ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ
- ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು
- ಚಿತ್ರದುರ್ಗದ ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನದ ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು
- ಗುಬ್ಬಿ ತಾಲೂಕಿನ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಮಹಾಸ್ವಾಮಿಗಳು
- ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು
- ಚಿತ್ರದುರ್ಗದ ವೇದಾರ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಕೇತೇಶ್ವರ ಮಹಾಸ್ವಾಮಿಗಳು
- ಕೊರಟಗೆರೆ ತಾಲೂಕಿನ ತಂಗನಹಳ್ಳಿಯ ಕಾಶಿ ಅನ್ನಪೂರ್ಣೇಶ್ವರಿ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ
- ತುಮಕೂರಿನ ಬೆಳ್ಳಾವಿ ಕಾರದ ಮಠದ ಕಾರದ ಶ್ರೀ ವೀರಬಸವ ಸ್ವಾಮೀಜಿ
- ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ಚನ್ನಬಸವ ಸ್ವಾಮೀಜಿ
ಒಟ್ಟಾರೆ ಹಲವು ಮಠಗಳ ಸ್ವಾಮೀಜಿಗಳು ರಾಜಣ್ಣಗೆ ಬೆಂಬಲ ಸೂಚಿಸಿದ್ದಾರೆ. 'ರಾಜಣ್ಣ ವಾಲ್ಮೀಕಿ ಸಮಾಜ ಮಾತ್ರವಲ್ಲದೆ ಎಲ್ಲಾ ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮತ್ತೊಂದು ಅವಕಾಶ ನೀಡಬೇಕು' ಎಂದು ಸ್ವಾಮೀಜಿಗಳ ನಿಯೋಗವು ಒತ್ತಾಯಿಸಲಿದೆ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
