ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುವುದಿಲ್ಲ ಎಂದಿದ್ದರು.

ತುಮಕೂರು (ಆ.25): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ವೇದಿಕೆಯಲ್ಲಿ ಕೂರಬಹುದು. ಹೀಗೆ ಏನು ಬೇಕಾದರೂ ಮಾಡಬಹುದು. ಆದರೆ, ನಾವು ಮಾತ್ರ ಏನು ಮಾತನಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುವುದಿಲ್ಲ ಎಂದಿದ್ದರು.

ಅವರ ಹೇಳಿಕೆ ಬಳಿಕವೂ ಡಿ.ಕೆ.ಶಿವಕುಮಾರ್ ಅವರು ಗಂಗೆಯಲ್ಲಿ ಸ್ನಾನ ಮಾಡಿದರು. ಅಲ್ಲದೇ ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ವೀಕರಿಸಲಿಲ್ಲ. ಆದರೆ, ಡಿಕೆಶಿ ಕುಟುಂಬ ಸಮೇತರಾಗಿ ಅಂಬಾನಿ ಮಗನ ಮದುವೆಗೆ ಹೋದರು. ನಾವು ಮಂತ್ರಿಗಳ, ಶಾಸಕರ ಸಭೆ ಕರೆಯುವಂತಿಲ್ಲ. ಆದರೆ ಬೇರೆಯವರು ಕರೆಯಬಹುದು ಎಂದು ಡಿಕೆಶಿಗೆ ತಿರುಗೇಟು ನೀಡಿ, ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದರು.

ರಾಜಣ್ಣ ವಜಾದಿಂದ ದಲಿತರಿಗೆ ಅನ್ಯಾಯ: ರಾಜ್ಯದ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರನ್ನು ಮಂತ್ರಿ ಪದವಿಯಿಂದ ಏಕಾಏಕಿ ತೆಗೆದಿರುವುದು ಕೇವಲ ಅವರಿಗೆ ಮಾಡಿರುವ ಅನ್ಯಾಯ ಮಾತ್ರವಲ್ಲ. ರಾಜ್ಯದ ಇಡೀ ದಲಿತರಿಗೆ, ಹಿಂದುಳಿದ ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಚ್.ವಿ.ವಸಂತಕುಮಾರ್ ಮತ್ತು ಕೆಡಿಪಿ ಸದಸ್ಯ ವಿಜಯ್ ಹೇಳಿದ್ದಾರೆ. ಕೆ.ಎನ್.ರಾಜಣ್ಣ ಕೇವಲ ಜಿಲ್ಲೆಗೆ ಸೀಮಿತವಾದವರಾಗಿರಲಿಲ್ಲ. ಅವರ ಸೇವೆ ರಾಜ್ಯವ್ಯಾಪಿ ಇದೆ. ಸಹಕಾರ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಸಾಧನೆ ಬಣ್ಣಿಸಲು ಸಾಧ್ಯವಿಲ್ಲ. ಕೆ.ಎನ್. ಆರ್ ಕೇವಲ ವಾಲ್ಮೀಕಿ ಸಮುದಾಯವನ್ನು ಮಾತ್ರ ಪ್ರತಿನಿಧಿಸುತ್ತಿರಲಿಲ್ಲ. ಅವರು ಹಿಂದುಳಿದವರು, ದೀನದಲಿತರ ಆಶಾಕಿರಣವಾಗಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ ಎನ್ ಆರ್ ರವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅಪಾರ ಸೇವೆಯನ್ನು ಮಾಡಿದ್ದಾರೆ. ಬಡಜನರ ಏಳಿಗೆಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನೇರ ನುಡಿಗೆ ಹೆಸರಾಗಿರುವ ಕೆ ಎನ್ ಆರ್ ರವರು ಪಕ್ಷದ ವಿರುದ್ಧ ದನಿ ಎತ್ತಿದ್ದರೆ, ಅವರಿಗೆ ಪಕ್ಷ ಮೊದಲು ನೋಟೀಸ್ ನೀಡಿ ಸ್ಪಷ್ಟನೆ ಕೇಳಬೇಕಿತ್ತು. ಈ ಮಾರ್ಗವನ್ನು ಅನುಸರಿಸದೇ ಏಕಾಏಕಿ ಮಂತ್ರಿ ಪದವಿಯಿಂದ ತೆಗೆದಿರುವುದು ಹಿಂದುಳಿದ ವರ್ಗಗಳಿಗೆ ಮಾಡಿರುವ ದ್ರೋಹ ಎಂದು ಕಿಡಿಕಾರಿದ್ದಾರೆ. ಕೆ.ಎನ್.ರಾಜಣ್ಣನವರನ್ನು ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತರವೇ ಇದೆ ಎಂಬ ಗುಮಾನಿ ಇದೆ. ರಾಜ್ಯದಲ್ಲಿ ಬಡವರ ಪರ ಆಡಳಿತ ಮಾಡಿದ್ದ ರಾಜಣ್ಣನವರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ದಂಡ ತೆರಬೇಕಾದೀತು ಎಂದು ವಸಂತಕುಮಾರ್ ಮತ್ತು ವಿಜಯ್ ಎಚ್ಚರಿಕೆ ನೀಡಿದ್ದಾರೆ.