ಸುಪ್ರೀಂ ಕೋರ್ಟ್ ತೀರ್ಪಿನಿಂದ 1.68 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಇಟಿ ಅರ್ಹತೆಯನ್ನು ಪೂರ್ವಾನ್ವಯಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.
ಬೆಂಗಳೂರು (ಸೆ.9): ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಅರ್ಹತೆಯನ್ನು ಪ್ರಸ್ತುತ ಸೇವೆಯಲ್ಲಿರುವ ಶಿಕ್ಷಕರಿಗೆ ಪೂರ್ವಾನ್ವಯಗೊಳಿಸದಂತೆ ಸಚಿವ ಸಂಪುಟದಲ್ಲಿ ದೃಢ ನಿರ್ಧಾರ ಕೈಗೊಂಡು ಲಕ್ಷಾಂತರ ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಚೇತನ್ ಎಚ್.ಎಸ್. ಮತ್ತಿತರ ಪದಾಧಿಕಾರಿಗಳು, ನಮ್ಮ ಸಂಘವು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸುತ್ತದೆ. ಹಾಲಿ ಸೇವೆಯಲ್ಲಿರುವ ಶಿಕ್ಷಕರಿಗೂ ಸೇವೆಯಲ್ಲಿ ಮುಂದುವರೆಯಲು ಮತ್ತು ಬಡ್ತಿಗಾಗಿ ಟಿಇಟಿ ಪಾಸು ಮಾಡಬೇಕೆಂದು ತೀರ್ಪಿನಲ್ಲಿ ಸೂಚಿಸಲಾಗಿದೆ. ಇದು ಅಧಿಕೃತ ಮತ್ತು ಹಲವು ವರ್ಷಗಳಿಂದ ವೃತ್ತಿಯಲ್ಲಿರುವ ಶಾಲಾ ಶಿಕ್ಷಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ 1.68 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಹಾಗಾಗಿ ಈ ತೀರ್ಪನ್ನು ವಿನಮ್ರವಾಗಿ ಪರಿಶೀಲಿಸಿ ಸೇವಾನಿರತ ಶಿಕ್ಷಕರಿಗೆ ಟಿಇಟಿ ಅರ್ಹತೆಯಿಂದ ವಿನಾಯಿತಿ ನೀಡಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಕೋರಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಟಿಇಟಿಯನ್ನು ಜಾರಿಗೆ ತಂದಿರುವುದು 2014ರಿಂದ. ಈಗ ಅದಕ್ಕೂ ಪೂರ್ವದಲ್ಲಿ ಸಿಇಟಿ ಮೂಲಕ ಶಿಕ್ಷಕರಾಗಿ ನೇಮಕಗೊಂಡವರೂ ಬಡ್ತಿ ಹಾಗೂ ಸೇವೆಯಲ್ಲಿ ಮುಂದುವರೆಯಲು ಈಗ ಟಿಇಟಿ ಪಾಸು ಮಾಡಬೇಕು ಎನ್ನುವುದು ಎಷ್ಟು ಸರಿ? ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ತೀವ್ರ ಕೊರತೆ ಇದೆ. ಸರ್ಕಾರ ಸೂಕ್ಷ್ಮವಾಗಿ ತೀರ್ಪನ್ನು ಪರಿಶೀಲಿಸಿ ಅಗತ್ಯ ಮೇಲ್ಮನವಿ ಸಲ್ಲಿಸುವ ಮೂಲಕ ಇದರಿಂದ ಆಗಿರುವ ಪರಿಣಾಮವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಜೊತೆಗೆ ಈ ತೀರ್ಪನ್ನು ಟಿಇಟಿ ಜಾರಿಯಾಗುವ ಮೊದಲು ನೇಮಕಗೊಂಡ ಶಿಕ್ಷಕರಿಗೆ ಪೂರ್ವಾನ್ವಯಗೊಳಿಸದಂತೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಲಕ್ಷಾಂತರ ಶಿಕ್ಷಕರಿಗೆ ನ್ಯಾಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
