ಡಾ. ಎಸ್.ಎಲ್. ಭೈರಪ್ಪ ಅವರಿಗೆ ರಾಜ್ಯ ಸರ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದೆ. ನಾಳೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು (ಸೆ.24): ಕನ್ನಡ ಸಾಹಿತ್ಯ ಲೋಕದ ದಂತಕಥೆ, ಮೇರು ಕಾದಂಬರಿಕಾರ ಪದ್ಮವಿಭೂಷಣ ಡಾ. ಎಸ್.ಎಲ್. ಭೈರಪ್ಪ (94) ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಡಾ. ಎಸ್.ಎಲ್. ಭೈರಪ್ಪ ಅವರು ಇಂದು ಮಧ್ಯಾಹ್ನ 2.38ಕ್ಕೆ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಮೂರು ದಿನಗಳಿಂದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ವೈದ್ಯರ ಪ್ರಯತ್ನಗಳು ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೀಗ ಅವರಿಗೆ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ:

ಭೈರಪ್ಪ ಅವರ ಪಾರ್ಥಿವ ಶರೀರವನ್ನು ನಾಳೆ (ಸೆ.25ರಂದು) ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭೈರಪ್ಪ ಅವರ ಅಭಿಮಾನಿಗಳು ಮತ್ತು ಸಾಹಿತ್ಯ ಪ್ರೇಮಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಅವರ ಕುಟುಂಬಸ್ಥರು, ಅವರ ಅನುಯಾಯಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಇಂದು ಯಾರೂ ಆಸ್ಪತ್ರೆಗೆ ಬರಬಾರದು ಎಂದೂ ಕುಟುಂಬ ವಿನಂತಿಸಿದೆ.

ಮೈಸೂರಿನಲ್ಲಿಯೂ ಅಂತಿಮ ದರ್ಶನ:

ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ಮುಗಿದ ಬಳಿಕ ಮಧ್ಯಾಹ್ನದ ತರುವಾಯ ಪಾರ್ಥಿವ ಶರೀರವನ್ನು ಗೌರವಪೂರ್ವಕವಾಗಿ ಮೈಸೂರಿಗೆ ಕೊಂಡೊಯ್ಯಲಾಗುವುದು. ಅಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕನ್ನಡದ ಮೇರು ಕಾದಂಬರಿಕಾರ:

ಎಸ್.ಎಲ್.ಭೈರಪ್ಪ ಅವರು ತಮ್ಮ ಜೀವಿತಾವಧಿಯಲ್ಲಿ 'ವಂಶವೃಕ್ಷ', 'ಪರ್ವ', 'ಸಾರ್ಥ' ಮತ್ತು 'ಅವರಣ' ಸೇರಿದಂತೆ ಇಪ್ಪತ್ತಾರು ಕಾದಂಬರಿಗಳನ್ನು ಬರೆದಿದ್ದಾರೆ. ಸಮಾಜ, ಇತಿಹಾಸ ಮತ್ತು ಮಾನವ ಸಂಬಂಧಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅವರ ಬರಹಗಳು ಕನ್ನಡ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.