ಆಳಂದ ಮತಗಳವು ಯತ್ನದ ಕುರಿತು ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ, ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಿಂದ ಮತ ಅಳಿಸಿಹಾಕುವ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ ಸಿಕ್ಕ ದಾಖಲೆ ಈ ಎರಡು ಕ್ಷೇತ್ರಗಳ ಅಲ್ಪಸಂಖ್ಯಾತ ಮತದಾರರ ಮಾಹಿತಿಗಳು ಪತ್ತೆಯಾಗಿವೆ.

ಬೆಂಗಳೂರು (ಅ.24): ಆಳಂದ ಮತಗಳವು ಯತ್ನ ಬಯಲಾದ ಬೆನ್ನಲ್ಲೇ ಅದೇ ಜಿಲ್ಲೆಯ ಮತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಅಳಿಸಿ ಹಾಕುವ ಪ್ರಯತ್ನ ನಡೆದಿತ್ತು ಎಂಬ ಅನುಮಾನ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಲ್ಲಿ ವ್ಯಕ್ತವಾಗಿದೆ.

Add Asianetnews Kannada as a Preferred SourcegooglePreferred

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಕಳವು ಯತ್ನ ಶಂಕೆ ಮೂಡಿದ್ದು, ಇದಕ್ಕೆ ಕೆಲ ದಾಖಲೆಗಳು ಆಳಂದ ಪ್ರಕರಣದ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಗೆಲುವು ಸಾಧಿಸಿದ್ದರು.

ಇತ್ತೀಚೆಗೆ ಆಳಂದ ಕ್ಷೇತ್ರದ ಮತಗಳವು ಯತ್ನ ಸಂಬಂಧ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ ಕೆಲವರ ಮನೆಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾಲ್‌ ಸೆಂಟರ್‌ ಸಿಬ್ಬಂದಿ ಮನೆಯಲ್ಲಿ ಶೋಧನೆ ವೇಳೆ ಪತ್ತೆಯಾದ ದಾಖಲೆಗಳನ್ನು ಪರಿಶೀಲಿಸಿದಾಗ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಮತದಾರರ ಕುರಿತು ಮಾಹಿತಿ ಸಿಕ್ಕಿದೆ. ಈ ಎರಡು ಕ್ಷೇತ್ರಗಳ ಮತದಾರರ ಪಟ್ಟಿ ಹಾಗೂ ನಿರ್ದಿಷ್ಟ ಪಕ್ಷಕ್ಕೆ ಬೀಳುವ ಮತತಗಳು ಎಂದು ಊಹಿಸಿದ್ದ ಮತದಾರರ ವಿವರ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

ದೂರು ದಾಖಲಾಗಿಲ್ಲ-ತನಿಖೆ ಇಲ್ಲ:

ಅಂದು ಚುನಾವಣೆ ವೇಳೆ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಕಳವು ಯತ್ನ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ಆ ಕ್ಷೇತ್ರದ ಚುನಾವಣಾಧಿಕಾರಿಗಳು ದೂರು ನೀಡದೆ ತನಿಖೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಆ ಎರಡು ಕ್ಷೇತ್ರಗಳ ಬಗ್ಗೆ ಹೆಚ್ಚಿನ ತನಿಖೆಗೆ ಎಸ್‌ಐಟಿ ಮುಂದಾಗಿಲ್ಲ ಎಂದು ತಿಳಿದು ಬಂದಿದೆ.

ಅಲ್ಪಸಂಖ್ಯಾತರ ಮತಗಳಿಗೆ ಕನ್ನ:

ಈ ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಕನ್ನ ಹಾಕುವ ಯತ್ನ ನಡೆದಿತ್ತು ಎನ್ನಲಾಗಿದೆ. ಕಲಬುರಗಿ ಉತ್ತರದಲ್ಲಿ ಅಲ್ಪಸಂಖ್ಯಾತರ ಮತಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ. ಅದೇ ರೀತಿ ದಕ್ಷಿಣದಲ್ಲಿ ಫಲಿತಾಂಶ ಬದಲಾಯಿಸುವ ಮಟ್ಟಿಗೆ ಆ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ. ಹೀಗಾಗಿ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಅದೇ ಸಮುದಾಯದವರನ್ನು ಕೆಲವರು ಗುರಾಣಿಯಾಗಿ ಬಳಸಿದ್ದಾರೆ ಎನ್ನಲಾಗಿದೆ.