ಜಿಲ್ಲೆಯಾದ್ಯಂತ ಸುರಿದ ಮಳೆಗೆ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ 1.05 ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರಲ್ಲಿ ಬೆಳೆ ವಿಮೆಯಡಿ ನೋಂದಾಯಿತರ ಪೈಕಿ ಶೇ.45ರಷ್ಟು ರೈತರು ಪರಿಹಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ (ಸೆ.16): ಕಳೆದ ಆಗಸ್ಟ್ ಮತ್ತು ಇತ್ತೀಚೆಗೆ ಕಲಬುರಗಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ 1.05 ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರಲ್ಲಿ ಬೆಳೆ ವಿಮೆಯಡಿ ನೋಂದಾಯಿತರ ಪೈಕಿ ಶೇ.45ರಷ್ಟು ರೈತರು ಪರಿಹಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ತಾಲೂಕಿನ ಕೆರೆ ಭೋಸಗಾ ಗ್ರಾಮದಲ್ಲಿ ಸರ್ವೆ ನಂಬರ್ 87/2 ರಲ್ಲಿನ ಪಾರ್ವತಿಬಾಯಿ‌ ಶ್ರೀಮಂತರಾವ ಅವರ ಹೊಲಕ್ಕೆ ಭೇಟಿ‌ ನೀಡಿದ ಸಚಿವರು, ಸುಮಾರು 4 ಎಕರೆಯಲ್ಲಿ ಬೆಳೆದ ತೊಗರಿ ಇತ್ತೀಚಿನ‌ ಮಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿದ್ದಲ್ಲದೆ ರೈತರಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿನ ಬೆಳೆ ಹಾನಿ ನಿಖರ ತನಿಖೆಗೆ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳನ್ನು ಒಳಗೊಂಡ ತಂಡ‌ ರಚಿಸಿ ಜಂಟಿ ಸಮೀಕ್ಷೆಗೆ ಅದೇಶಿಸಲಾಗಿದೆ. ಬೆಳೆ ಹಾನಿ ಇನ್ನು ಹೆಚ್ಚಾಗಿರುವ ಸಾಧ್ಯತೆ ಇದೆ ಎಂದರು. ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಹಣ ತುಂಬಾ ಕಡಿಮೆ ಸಿಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ‌ ನೀಡಬೇಕಾಗುತ್ತದೆ‌ ಎಂದು ಸಚಿವರು ಉತ್ತರಿಸಿದರು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಸೋಮಶೇಖರ ಬಿರಾದಾರ, ಕಲಬುರಗಿ ತಹಸೀಲ್ದಾರ್ ಕೆ. ಆನಂದಶೀಲ ಮೊದಲಾದವರು ಇದ್ದರು.

ಕಾಂಗ್ರೆಸ್ಸಿಗೆ ಆರೆಸ್ಸೆಸ್‌ ಎಂದಿಗೂ ಶತ್ರ

ಆರ್‌ಎಸ್‌ಎಸ್‌ ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್‌ ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಪ್ರಬುದ್ಧ ಭಾರತ ನಿರ್ಮಾಣ ಆಗಬೇಕಾದರೆ ದೇಶದ ಪ್ರತಿ ಪ್ರಜೆಯೂ ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ ಗೀತೆ ಹಾಡಿದ ಬೆನ್ನಲ್ಲೇ ಪ್ರಿಯಾಂಕ್‌ ಖರ್ಗೆ ಅವರು ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಈ ಪೋಸ್ಟ್‌ ಕುತೂಹಲ ಕೆರಳಿಸಿದೆ.

ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ಆರ್‌ಎಸ್‌ಎಸ್‌ ನರ ನಾಡಿ, ರಕ್ತಗಳಲ್ಲಿ ಪ್ರವಹಿಸಿಕೊಳ್ಳುತ್ತಿದೆ. ಈ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ. ಏಕೆಂದರೆ ಆರ್‌ಎಸ್‌ಎಸ್‌ ಸಂವಿಧಾನಕ್ಕೆ ಶತ್ರು, ಐಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಏಕತೆ ಹಾಗೂ ಸಾರ್ವಭೌಮತೆಗೆ ಶತ್ರು. ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರ್‌ಸ್ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ್ದ ಸರ್ದಾರ್‌ ಪಟೇಲರು ನಿಷೇಧ ಹೇರಿದ್ದರು ಎಂದು ಹೇಳಿದ್ದಾರೆ.