ಹೈಕಮಾಂಡ್‌ ತೀರ್ಮಾನವೇ ಅಂತಿಮ. ಆದರೂ, ಹೊಸದಾಗಿ ಮುಖ್ಯಮಂತ್ರಿ ಆಯ್ಕೆ ಮಾಡುವಾಗ ವೀಕ್ಷಕರನ್ನು ನೇಮಿಸಿ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

ಬೆಂಗಳೂರು (ಅ.15): ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಆದರೂ, ಹೊಸದಾಗಿ ಮುಖ್ಯಮಂತ್ರಿ ಆಯ್ಕೆ ಮಾಡುವಾಗ ವೀಕ್ಷಕರನ್ನು ನೇಮಿಸಿ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹೊಸದಾಗಿ ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಹೈಕಮಾಂಡ್‌ ನಾಯಕರು ಮೊದಲಿಗೆ ವೀಕ್ಷಕರನ್ನು ಕಳುಹಿಸುತ್ತಾರೆ. ಅವರು ಶಾಸಕರ ಅಭಿಪ್ರಾಯ ಪಡೆದು ಅದನ್ನು ಹೈಕಮಾಂಡ್‌ಗೆ ನೀಡುತ್ತಾರೆ. ಶಾಸಕರು ನೀಡುವ ಅಭಿಪ್ರಾಯದ ಮೇಲೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ನಮ್ಮ ಪಕ್ಷದ ಪದ್ಧತಿ ಎಂದು ಹೇಳಿದರು.

ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ನಿರ್ಧಾರ

ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಮುಂದಿನ ಅವಧಿಗೂ ನಾನೇ ಸಿಎಂ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಎಲ್ಲ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲಿ ಆಗುತ್ತವೆ ಎಂದರು.ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುವೆ, ಮುಂದಿನ ದಸರಾ ಆಚರಣೆ ನೇತೃತ್ವವನ್ನು ನಾನೇ ಮಾಡಬಹುದು ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರು ಸಿಎಂ ಇದ್ದಾರೆ.

ಜನರು‌ ಕೇಳಿದಾಗ ಹಾಗೇ ಹೇಳಬೇಕಾಗುತ್ತದೆ. ಜನರು‌ ಕೇಳಿದಾಗ ನಾನು ಬಿಡುತ್ತೇನೆ ಎಂದು‌ ಹೇಳುತ್ತಾರೆಯೇ? ಅಕ್ಟೋಬರ್‌ ಕ್ರಾಂತಿ ಅಂದರು, ಈಗ ನವೆಂಬರ್‌ ಕ್ರಾಂತಿ ಎನ್ನುತ್ತಾರೆ. ಮುಂದೆ ಡಿಸೆಂಬರ್‌ ಬರುತ್ತದೆ. ಪವರ್‌ ಶೇರಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಗೊತ್ತು. ಒಂದು ವೇಳೆ ಪವರ್‌ ಶೇರಿಂಗ್ ಆಗಿದ್ದರೆ ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತು. ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿದರು. ಭೀಮಾನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಿಯೋಗ ಭೇಟಿ ನೀಡಿರುವ ಕುರಿತು ಮಾತನಾಡಿ, ಪ್ರವಾಹ ಕುರಿತು ಸಿಎಂ ಹಾಗೂ ನಾವು ವೈಮಾನಿಕ ಸಮೀಕ್ಷೆ ಮಾಡಿದ ಬಳಿಕ ತುರ್ತಾಗಿ ಪರಿಹಾರ ಘೋಷಣೆ ಮಾಡಿದ್ದೇವೆ. ಪ್ರತಿ ಹೆಕ್ಟೇರ್‌ಗೆ ₹17,000 ಘೋಷಣೆ ಮಾಡಿದ್ದೇವೆ.

ಕೇಂದ್ರದ 14ನೇ ಫೈನಾನ್ಸ್ ಕಮೀಷನ್ ₹60 ರಿದ 70 ಸಾವಿರ ಕೋಟಿ ನಮ್ಮ ರಾಜ್ಯಕ್ಕೆ ಬರುವಂಥದ್ದು ಬಂದಿಲ್ಲ. ಇದು ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ₹5800 ಕೋಟಿ ಕೇಂದ್ರದ ಕ್ಯಾಬಿನೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿವರೆಗೆ ಒಂದು ರೂಪಾಯಿಯೂ ಬಂದಿಲ್ಲ. ಮೊದಲು ಬಿಜೆಪಿಯವರು ಆ ಕೆಲಸ ಮಾಡಿಸಲಿ. ಎನ್‌ಡಿಆರ್‌ಎಫ್ ನಾರ್ಮ್ಸ್ ರಿವೈಸ್ ಮಾಡಲು ಹೇಳಲಿ. ₹8500 ಇರೋದನ್ನು ₹20,000 ಮಾಡಿಸಲಿ. ಈ ಬಗ್ಗೆ ದೆಹಲಿಗೆ ಹೋಗಿ ಕೇಳಲಿ ಎಂದು ತಿರುಗೇಟು ನೀಡಿದರು.