ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬೆಳೆ ಹಾನಿ, ಜನರ ಸಂಕಷ್ಟದ ಬಗ್ಗೆ ಗಮನಹರಿಸದೆ, ಜಾತಿ ಗಣತಿಯಂತಹ ವಿಷಯಗಳಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕದಲ್ಲಿ ಉಂಟಾದ ಮಳೆ ಪ್ರವಾಹ ಪರಿಸ್ಥಿತಿ ಹಾಗೂ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದರು. ಕುಮಾರಸ್ವಾಮಿ ಅವರು ರಾಜ್ಯದ ಹಲವೆಡೆ ಉತ್ತಮ ಮಳೆಯಾದರೂ, ಆ ಮಳೆಯೇ ಪ್ರವಾಹದ ಸ್ವರೂಪ ಪಡೆದಿರುವುದಾಗಿ ಹೇಳಿದರು. ಕಲ್ಯಾಣ ಕರ್ನಾಟಕ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಣಪತಿ ಹಬ್ಬದ ವೇಳೆಯೇ ಪ್ರವಾಹ ಉಂಟಾಗಿದೆ. ಈಗಲೂ ಆರು ಜಿಲ್ಲೆಗಳು ಪ್ರವಾಹದ ತೀವ್ರ ಪರಿಣಾಮ ಅನುಭವಿಸುತ್ತಿವೆ. “ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮನೆಗಳಿಗೂ ನೀರು ನುಗ್ಗಿದೆ, 12 ಗೋಶಾಲೆಗಳು ಮುಳುಗಿವೆ. ಮಹಾರಾಷ್ಟ್ರದಿಂದ 4.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಷ್ಟಕರಗಿಸಿದೆ” ಎಂದು ವಿವರಿಸಿದರು.

ಜನರು ಹಲವು ದಿನಗಳಿಂದ ಸಂಕಷ್ಟದಲ್ಲಿದ್ದರೂ ಯಾವುದೇ ರಾಜ್ಯ ಸಚಿವರು ಭೇಟಿ ನೀಡಿಲ್ಲವೆಂದು ಆರೋಪಿಸಿದರು. ಚಿಕ್ಕಮಗಳೂರು ಭಾಗದಲ್ಲಿ ಮಳೆ ನಿಂತು ಬೆಳೆ ನಾಶವಾಗಿದೆ, ಮನೆ ಹಾನಿಯಾಗಿದೆ. ಆದರೂ ಸಹಾಯ ಕೈ ಚಾಚಿಲ್ಲ ಎಂದರು. ಆರೋಗ್ಯ ಸಮಸ್ಯೆ ಇರದಿದ್ದರೆ ತಾವು ಸ್ವತಃ ಪ್ರವಾಹ ಪ್ರದೇಶದಲ್ಲಿ ಒಂದು ವಾರ ಕ್ಯಾಂಪ್ ಮಾಡುತ್ತಿದ್ದೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಟೀಕೆ

ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಕಾರ್ಯಶೈಲಿಯನ್ನು ತೀವ್ರವಾಗಿ ಟೀಕಿಸಿದರು. ಪದೇ ಪದೇ ಕೇಂದ್ರ ಸರ್ಕಾರದ ಜೊತೆ ಘರ್ಷಣೆ ಮಾಡಬೇಡಿ. ವಿಶ್ವಾಸದಿಂದ ಕೇಳಿದರೆ ನೆರವು ಸಿಗುತ್ತದೆ. ಒರಟು ಮಾತುಗಳ ಬದಲು ಸಂವಹನಕ್ಕೆ ಒತ್ತು ಕೊಡಿ” ಎಂದು ಸಲಹೆ ನೀಡಿದರು. ಜಾತಿ ಗಣತಿಯಂತಹ ವಿಷಯಗಳಲ್ಲಿ ಕಾಲ ವ್ಯರ್ಥ ಮಾಡುತ್ತಿರುವುದನ್ನು ಟೀಕಿಸಿದ ಅವರು, “ಕೃಷಿಕನಿಗೆ ಸರಿಯಾದ ಸಾಲ ಸಿಗುತ್ತಿಲ್ಲ. ಎಷ್ಟು ಪರ್ಸೆಂಟ್ ಸಾಲ ನೀಡಿದ್ದೀರಿ ಎಂದು ಸಿಎಂ ಉತ್ತರಿಸಲಿ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಸಮಸ್ಯೆಗಳ ಕುರಿತು ಟೀಕೆ

ಬೃಹತ್‌ ನಗರ ಬೆಂಗಳೂರಿನ ಸಮಸ್ಯೆಗಳ ಕುರಿತಂತೆ ಮಾತನಾಡಿದ ಎಚ್.ಡಿ.ಕೆ, “ರಸ್ತೆ ಗುಂಡಿಗಳ ವಿಚಾರದಲ್ಲಿ ಸಿಎಂ ನಗರ ಪ್ರದಕ್ಷಿಣೆ ಮಾಡಿದ್ರು. ಆದರೆ ಮುಚ್ಚಿದ ಗುಂಡಿಯ ಹಿಂದೆ ಹೊಸ ಗುಂಡಿಗಳು ತೆರೆದಿವೆ. ಜನರ ಸಮಸ್ಯೆಯನ್ನು ಪರಿಹರಿಸದಿದ್ದರೆ ಸಿಎಂಗೆ ಜನರು ತಿರುಗೇಟು ಕೊಡುತ್ತಾರೆ” ಎಂದು ಎಚ್ಚರಿಸಿದರು. ದಸರಾ ಪ್ರಯುಕ್ತ ಬಸ್‌ ಟಿಕೆಟ್ ದರವನ್ನು ಹೆಚ್ಚಿಸಿರುವುದರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. “ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವ ಹೆಸರಿನಲ್ಲಿ ಸಾರ್ವಜನಿಕ ಸಾರಿಗೆ ದರ ಹೆಚ್ಚಿಸಲಾಗಿದೆ. ಇದು ಜನರ ಮೇಲೆ ಭಾರ ಹಾಕುವಂತಾಗಿದೆ” ಎಂದರು.

ಡಿಕೆಶಿಗೆ ಟಾಂಗ್

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ನೇರವಾಗಿ ಟೀಕಿಸಿದ ಎಚ್.ಡಿ.ಕೆ, 2006ರಲ್ಲಿ ನಾನು ಐದು ಟೌನ್‌ಶಿಪ್ ಮಾಡುವ ನಿರ್ಧಾರ ಮಾಡಿದ್ದೆ. ಡಿಕೆಶಿಯೇ ಕೇಳಲಿ, ನಾನು ಭೂಸ್ವಾಧೀನ ಪ್ರಕ್ರಿಯೆ ಮಾಡಿರಲಿಲ್ಲ. ದಾಖಲೆಗಳು ಇದಿವೆ. ಕಾಂಗ್ರೆಸ್ ನಾಯಕರೇ ಮಾಡಿದ ಸತ್ಯಶೋಧನಾ ಸಮಿತಿಯ ವರದಿ ನೋಡಿ. ಈಗ ನನ್ನ ಮೇಲೆ ಆರೋಪಿ ಮಾಡುವುದು ಅಸಂಬಂಧಿತ ಎಂದು ಟಾಂಗ್ ನೀಡಿದರು. ಅವರು ಶಾಂತಿನಗರ ಹೌಸಿಂಗ್ ಸೊಸೈಟಿ, ಎನ್‌ಟಿಐ ಸೊಸೈಟಿ ಪ್ರಕರಣಗಳ ದಾಖಲೆಗಳನ್ನು ತಮ್ಮ ಬಳಿ ಇವೆಂದು ತಿಳಿಸಿ, “ಜನರ ಆಸ್ತಿಯನ್ನು ಲೂಟಿ ಮಾಡುವವರನ್ನು ತಡೆಯಲು ಜನ ಐದು ವರ್ಷ ಅಧಿಕಾರ ನೀಡಬೇಕು” ಎಂದರು.

ಸರ್ಕಾರಕ್ಕೆ ಎಚ್ಚರಿಕೆ

ಉತ್ತರ ಕರ್ನಾಟಕ ಪ್ರವಾಹವನ್ನು ತಾತ್ಸಾರವಾಗಿ ತೆಗೆದುಕೊಳ್ಳಬೇಡಿ. ಯುದ್ಧೋಪಾದಿಯಲ್ಲಿ ಪರಿಹಾರ ಘೋಷಿಸಿ. ಮಂತ್ರಿಗಳನ್ನು ಎಸಿ ರೂಮ್‌ಗಳಲ್ಲಿ ಕೂತಿರಿಸದೆ, ತಂಡ ಮಾಡಿ ಪ್ರವಾಹ ಪ್ರದೇಶಗಳಿಗೆ ಕಳುಹಿಸಿ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮಹಾರಾಷ್ಟ್ರದಲ್ಲಿ ನೀರಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದೇ ಇದ್ದದ್ದನ್ನು ಉಲ್ಲೇಖಿಸಿ, “ಅಲ್ಲಿ ಚೆಕ್‌ಡ್ಯಾಂ ಕಟ್ಟಿದ ನೀರನ್ನು ಏಕಾಏಕಿ ಬಿಡುತ್ತಿದ್ದಾರೆ. ಇದನ್ನು ತಿಳಿದಿದ್ದೂ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಸುಮ್ಮನೆ ಕೂತಿದ್ದಾರೆ” ಎಂದು ಟೀಕಿಸಿದರು.

ರಾಜಕೀಯದ ಕುರಿತು ಸಂದೇಶ

“ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಗೆಲ್ಲಿಸಿದ ಜನರ ಕೃತಜ್ಞತೆಯನ್ನು ತೀರಿಸಬೇಕು. ಜಾತಿಗಣತಿಯಿಂದ ಏನೂ ಬದಲಾಗುವುದಿಲ್ಲ. ಬಡವರ ನೆರವಿಗೆ ಬನ್ನಿ. ಜಾತಿ ಜಾತಿಯ ನಡುವೆ ಸಂಘರ್ಷ ತಂದು ಇಡುವುದನ್ನು ನಿಲ್ಲಿಸಿ” ಎಂದು ಕುಮಾರಸ್ವಾಮಿ ಮನವಿ ಮಾಡಿದರು. ಕುಣಿಗಲ್‌ನ್ನು ಬೆಂಗಳೂರಿಗೆ ಸೇರಿಸುವ ಯತ್ನದ ವಿರುದ್ಧವಾಗಿ ಕೂಡಾ ಪ್ರತಿಕ್ರಿಯಿಸಿದ ಅವರು, “ಇವರಿಗೆ ಬಿಟ್ಟರೆ ಮಂಗಳೂರನ್ನೇ ಬೆಂಗಳೂರಿಗೆ ಸೇರಿಸುತ್ತಾರೆ” ಎಂದು ವ್ಯಂಗ್ಯವಾಡಿದರು.

ಪ್ರವಾಹದ ದುಸ್ಥಿತಿ, ರೈತರ ಸಂಕಷ್ಟ, ಸರ್ಕಾರದ ನಿರ್ಲಕ್ಷ್ಯ, ರಾಜಕೀಯ ಲೆಕ್ಕಾಚಾರ ಮತ್ತು ಅಧಿಕಾರಿಗಳ ಅನಾಸಕ್ತಿ—ಇವೆಲ್ಲದರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ತಮ್ಮ ಕಿಡಿ ಉಗಿದರು. “ಬೈಯುವುದರಿಂದ ಏನೂ ಆಗುವುದಿಲ್ಲ, ಬಂದು ಕೇಂದ್ರದ ಜೊತೆ ಮಾತಾಡಿ. ರಾಜ್ಯದ ಜನರ ಹಿತವನ್ನು ಪ್ರಥಮ ಪ್ರಧಾನವಾಗಿಸಿಕೊಳ್ಳಿ” ಎಂಬ ಸಂದೇಶ ನೀಡಿದರು.