ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಇಂದು ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ದಿನ ಶಾಸ್ತ್ರೋಕ್ತವಾಗಿ ಗೋಪೂಜೆ ಕಾರ್ಯಕ್ರಮ ನೆರವೇರಿದೆ.
ಬೆಂಗಳೂರು (ಅ.22): ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಇಂದು ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ದಿನ ಶಾಸ್ತ್ರೋಕ್ತವಾಗಿ ಗೋಪೂಜೆ ಕಾರ್ಯಕ್ರಮ ನೆರವೇರಿದೆ. ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ, ಕುಂಕುಮ ಹಚ್ಚಿ ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ಗೋಗ್ರಾಸ ನೀಡಿ ಇಂದು ಸಂಜೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಪೂಜಾ ಕಾರ್ಯಕ್ರಮ ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಬೆಂಗಳೂರಿನ ಕಾರಂಜಿ ಆಂಜನೇಯ ದೇವಸ್ಥಾನ, ಬನಶಂಕರಿ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಯಗಳಲ್ಲಿ ಗೋಪೂಜೆ ನೆರವೇರಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ, ರಾಜ್ಯದ ಮುಜರಾಯಿ ಅಧಿಸೂಚಿತ ದೇವಾಲಯಗಳಲ್ಲಿ ಬಲಿಪಾಡ್ಯಮಿ ದಿನದಂದು ಗೋಪೂಜೆ ಕಾರ್ಯಕ್ರಮ ಆಚರಿಸುವ ಬಗ್ಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮೌಖಿಕ ನಿರ್ದೇಶನ ನೀಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಪ್ರತೀ ವರ್ಷ ಯುಗಾದಿಯಿಂದ ಆರಂಭಗೊಂಡು ಮಹಾಶಿವರಾತ್ರಿವರೆಗೆ ಬರುವ ಎಲ್ಲಾ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ಪೈಕಿ ದೀಪಾವಳಿ ಹಬ್ಬದ ದಿನ ಗೋಪೂಜೆ ಮಾಡುವುದು ಕೂಡ ಒಂದು. ಪ್ರತೀ ವರ್ಷದಂತೆ ಈ ವರ್ಷವೂ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಮಾಡಲು ಎಲ್ಲಾ ದೇವಾಲಯಗಳಿಗೆ ಮುಜರಾಯಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.
ಸುತ್ತೋಲೆಯಲ್ಲೇನಿತ್ತು?
ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ಹೆಸರಿನಿಂದ ವಿಶೇಷ ಸ್ಥಾನ ನೀಡಿ ಪೂಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿರುವುದರಿಂದ ದೀಪಾವಳಿ (ಬಲಿಪಾಡ್ಯಮಿ) ದಿನದಂದು ಪ್ರತಿ ದೇವಾಲಯದಲ್ಲಿ ಒಂದೊಂದು ಗೋಮಾತೆ ಪೂಜಿಸಬೇಕು. ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸ ಹಸುವಿಗೆ ನೀಡಬೇಕು. ಗೋವುಗಳನ್ನು ಧೂಪ, ದೀಪಗಳಿಂದ ಪೂಜಿಸಿ, ನಮಸ್ಕರಿಸುವ ವ್ಯವಸ್ಥೆ ಮಾಡಬೇಕು. ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
