ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ರನ್ಯಾ ರಾವ್‌ ಸೇರಿ ನಾಲ್ವರು ಆರೋಪಿಗಳಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ದೊಡ್ಡ ಶಾಕ್‌ ನೀಡಿದ್ದಾರೆ.

ಬೆಂಗಳೂರು (ಸೆ.03): ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ರನ್ಯಾ ರಾವ್‌ ಸೇರಿ ನಾಲ್ವರು ಆರೋಪಿಗಳಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ದೊಡ್ಡ ಶಾಕ್‌ ನೀಡಿದ್ದಾರೆ. ಪ್ರಮುಖ ಆರೋಪಿ ರನ್ಯಾ ರಾವ್‌ ಸೇರಿ ನಾಲ್ವರು ಆರೋಪಿಗಳು ವಿದೇಶದಿಂದ ಸುಮಾರು 325 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಟ್ಟು 271 ಕೋಟಿ ರು. ದಂಡ ಪಾವತಿಸುವಂತೆ ನಾಲ್ವರಿಗೂ ನೋಟಿಸ್‌ ಜಾರಿಗೊಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ರನ್ಯಾ ರಾವ್‌ 127 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿದ್ದಕ್ಕಾಗಿ 102 ಕೋಟಿ ರು., ಈಕೆಯ ಸಹಚರರಾದ ತರುಣ್‌ ಕೊಂಡರಾಜು 72 ಕೆ.ಜಿ.ಗೆ 63 ಕೋಟಿ ರು., ಸಾಹಿಲ್‌ ಸಕಾರಿಯಾ ಜೈನ್‌ ಮತ್ತು ಆತನ ಸಂಬಂಧಿ ಭರತ್‌ ಕುಮಾರ್‌ ಜೈನ್‌ಗೆ ತಲಾ 63 ಕೆ.ಜಿ.ಗೆ ತಲಾ 53 ಕೋಟಿ ರು. ದಂಡ ಪಾವತಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಮಂಗಳವಾರ ಡಿಆರ್‌ಐ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ರನ್ಯಾ ರಾವ್‌ ಸೇರಿ ನಾಲ್ವರು ಆರೋಪಿಗಳಿಗೆ ಸುಮಾರು 250 ಪುಟಗಳ ನೋಟಿಸ್‌ ಜಾರಿಗೊಳಿಸಿದ್ದಾರೆ. ಇದರೊಂದಿಗೆ ಸುಮಾರು 2,500 ಪುಟಗಳ ದಾಖಲೆಗಳನ್ನು ಆರೋಪಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ: ನಟಿ ರನ್ಯಾ ರಾವ್ ಕಳೆದ ಮಾರ್ಚ್ 3ರಂದು ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಮಾಡಿಕೊಂಡು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಆಕೆಯನ್ನು ಬಂಧಿಸಿದ್ದರು. ಆಕೆಯಿಂದ ಬರೋಬ್ಬರಿ 12.56 ಕೋಟಿ ರು. ಮೌಲ್ಯದ 14 ಕೆ.ಜಿ. 213 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದರು. ಬಳಿಕ ಆಕೆಯ ನಿವಾಸದ ಮೇಲೆ ದಾಳಿ ಮಾಡಿ 2.67 ಕೋಟಿ ರು. ದಾಖಲೆ ಇಲ್ಲದ ನಗದು ಮತ್ತು 2.06 ಕೋಟಿ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆಕೆಯ ಸ್ನೇಹಿತರಾದ ತರುಣ್ ಕೊಂಡರಾಜು, ಸಾಹಿಲ್ ಸಕಾರಿಯಾ ಜೈನ್‌ ಹಾಗೂ ಭರತ್‌ ಕುಮಾರ್‌ ಜೈನ್‌ನನ್ನು ಬಂಧಿಸಿದ್ದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಗಳು ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗದಂತೆ ತಡೆಯಲು ಕಾಫಿಪೋಸಾ ಕಾಯ್ದೆ (1 ವರ್ಷ ಜಾಮೀನು ಇಲ್ಲ) ಜಾರಿಗೊಳಿಸಿದ್ದರು. ಹೀಗಾಗಿ ಕಳೆದ 6 ತಿಂಗಳಿಂದ ನಾಲ್ವರು ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ರನ್ಯಾಳ 34.12 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ: ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ.) ಈಗಾಗಲೇ ಪ್ರಮುಖ ಆರೋಪಿ ರನ್ಯಾ ರಾವ್‌ಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿನ 34.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ತನಿಖೆ ಮುಂದುವರೆಸಿದೆ.