ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಬೆಂಗಳೂರು ಸಜ್ಜಾಗಿದೆ. ದರ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆದಿದ್ದು, ಜನರು ಹಬ್ಬದ ಸಂಭ್ರಮದಲ್ಲಿದ್ದಾರೆ. ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ, ಜನರು ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು (ಆ.26): ಗೌರಿ-ಗಣೇಶ ಹಬ್ಬವನ್ನು ಸಡಗರ, ಸಂಭ್ರಮದಲ್ಲಿ ಆಚರಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಸೋಮವಾರ ದರ ಏರಿಕೆಯ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ವಿಶೇಷವಾಗಿ ಮಣ್ಣಿನ ಗಣಪತಿ ವಿತರಣೆ ಸೇರಿದಂತೆ ಪರಿಸರ ಸ್ನೇಹಿ ಆಚರಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆದಿದೆ.
ಸಾರ್ವಜನಿಕ ಹಾಗೂ ಮನೆಮನೆಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪಿಸಿ ಪೂಜಿಸಲು ಜನತೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದೆಲ್ಲೆಡೆ ಗಣಪತಿ ಗೌರಿ ಮೂರ್ತಿಗಳನ್ನು ಜನತೆ ಕೊಂಡೊಯ್ಯುತ್ತಿರುವುದು ಕಂಡು ಬಂದಿತು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಶಾಮಿಯಾನ, ಮಂಟಪ ಕಟ್ಟುವುದು ಸೇರಿ ಇತರೆ ಸಿದ್ಧತೆ ಮಾಡಿಕೊಂಡಿದ್ದು ಭರ್ಜರಿ ಹಬ್ಬದಾಚರಣೆಗೆ ಮುಂದಾಗಿದ್ದಾರೆ.
ಸೋಮವಾರವೂ ನಗರದ ಕೆ ಆರ್ ಮಾರ್ಕೆಟ್ ಗ್ರಾಹಕರಿಂದ ಕಿಕ್ಕಿರಿದಿತ್ತು. ಮಲ್ಲೇಶ್ವರ, ಗಾಂಧಿ ಬಜಾರ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು ಮತ್ತು ತರಕಾರಿಗಳ ಖರೀದಿಯಲ್ಲಿ ಗೃಹಿಣಿಯರು ಹೆಚ್ಚಾಗಿ ತೊಡಗಿದ್ದರು. ಎಂದಿನಂತೆ ಹೂವು-ಹಣ್ಣುಗಳ ಬೆಲೆ ಮುಗಿಲು ಮುಟ್ಟಿದೆ. ಖರೀದಿಗೆ ಬಂದಿರುವ ಮಹಿಳೆಯರು ದರ ಏರಿಕೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿತ್ತು. ಆದರೆ, ಭಾನುವಾರಕ್ಕೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಅಷ್ಟಾಗಿ ಇರಲಿಲ್ಲ ಎಂದು ವ್ಯಾಪಾರಿಗಳು ಹೇಳಿದರು.
ಹೂವುಗಳ ಜತೆಗೆ ಹಣ್ಣುಗಳ ಬೆಲೆಯೂ ಹೆಚ್ಚಾಗಿತ್ತು. ಏಲಕ್ಕಿ ಬಾಳೆಹಣ್ಣು ಕೆಜಿಗೆ ₹160 , ಕಿತ್ತಳೆ ₹ 200 ಮತ್ತು ಸೇಬು ₹ 240-260 ಮಾರಾಟವಾಗುತ್ತಿದ್ದು, ಎಲ್ಲ ಹಣ್ಣುಗಳ ಬೆಲೆ ಕನಿಷ್ಠ ₹ 30– ₹ 40 ಬೆಲೆ ಹೆಚ್ಚಾಗಿದೆ. ಪೂಜೆಗೆ ಅಗತ್ಯವಾದ ತೆಂಗಿನಕಾಯಿ ಮತ್ತು ಇತರ ಬಾಳೆಹಣ್ಣಿನ ದರ ₹40 ಗಳಷ್ಟು ದುಬಾರಿಯಾಗಿವೆ ಎಂದು ಗ್ರಾಹಕರು ಹೇಳಿದರು.
ಹೂವಿನ ಹಾರಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಹೂವು ಪೂರೈಕೆ ಕಡಿಮೆಯಾಗಿದ್ದು, ಬೆಲೆ ದುಪ್ಪಟ್ಟಾಗಲು ಕಾರಣವಾಗಿದೆ ಎಂದು ಕೆಆರ್ ಮಾರುಕಟ್ಟೆ ಮತ್ತು ಮಲ್ಲೇಶ್ವರಂನ ಮಾರಾಟಗಾರರು ಹೇಳುತ್ತಾರೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಖರೀದಿಯನ್ನು ಮಿತಿಗೊಳಿಸುತ್ತಿದ್ದೇವೆ. ಆ್ಯಪ್ ಮೂಲಕ ಆನ್‌ಲೈನ್ ಬೆಲೆ ಹೋಲಿಕೆ ಮಾಡಿ ಖರೀದಿಸುತ್ತಿದ್ದೇವೆಂದು ಗ್ರಾಹಕರು ಹೇಳಿದರು.
ದಿನಸಿ ಪದಾರ್ಥ
\Bಹೂವಿನ ದರ (ಕೆಜಿ-₹ )\B
ಮಲ್ಲಿಗೆ - 1500-2000
ಕನಕಾಂಬರ- 2000-2300
ಸೇವಂತಿಗೆ - 300 ರಿಂದ 400
ಗುಲಾಬಿ- 250 ರಿಂದ 300
ಕಣಗಲು - ಕೆಜಿಗೆ 500
ಹಾರ- 150 ರಿಂದ 2000
\Bಹಣ್ಣುಗಳ ದರ\B
ಆ್ಯಪಲ್ - 180-320
ದಾಳಿಂಬೆ - 130 - 160
ಮೂಸಂಬಿ ಕೆಜಿ - 50-100
ಕಿತ್ತಳೆ ಕೆಜಿ - 150 - 200
