ವಿದ್ಯುತ್ ಕಳ್ಳತನ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಮಾತ್ರ ನಡೆಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಬೀದರ್ ನಿವಾಸಿಗಳೊಬ್ಬರ ಅರ್ಜಿಯನ್ನು ವಜಾಗೊಳಿಸಿದೆ

-ವೆಂಕಟೇಶ್‌ ಕಲಿಪಿ

 ಬೆಂಗಳೂರು (ಆ.31): ವಿದ್ಯುತ್‌ ಕಳವು ಅಪರಾಧ ಸಂಬಂಧ ವಿದ್ಯುತ್‌ ಕಾಯ್ದೆಯಡಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯ ಮಾತ್ರ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಸ್ಪಷ್ಟಪಡಿಸಿ ಹೈಕೋರ್ಟ್‌ ಆದೇಶ ಮಾಡಿದೆ.

ವಿದ್ಯುತ್‌ ಕಳ್ಳತನ ಮಾಡಿ ಗುಲ್ಬರ್ಗಾ ವಿದ್ಯುತ್‌ ಸರಬರಾಜು ನಿಯಮಕ್ಕೆ (ಜೆಸ್ಕಾಂ) ಐದು ಲಕ್ಷ ರು. ನಷ್ಟ ಉಂಟು ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಬೀದರ್‌ ನಿವಾಸಿ ಹಮೀದ್‌ ಮಿಯಾನ್‌, ಅವರ ಪುತ್ರ ಚಾಂದ್‌ ಪಾಷಾ ಮತ್ತು ಸಹೋದರ ಉಸ್ಮಾನ್‌ ಮಿಯಾನ್‌ ಸಲ್ಲಿಸಿದ್ದ ವಜಾಗೊಳಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.

ವಿದ್ಯುತ್ ಕಾಯ್ದೆ-2003 ಸೆಕ್ಷನ್ 135ರ ಅಡಿ ವಿದ್ಯುತ್‌ ಕಳ್ಳತನ ಅಪರಾಧ ಸಂಬಂಧ ಕ್ರಮ ಕೈಗೊಳ್ಳುವ ಮೊದಲು ಕಾಯ್ದೆ ಸೆಕ್ಷನ್ 126ರ ಅಡಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಬೇಕೆಂಬ ಅರ್ಜಿದಾರರ ವಾದ ಪರಿಗಣಿಸಲಾಗದು. ವಿದ್ಯುತ್‌ ಕಳವು ಕೃತ್ಯ ನಡೆದಿದ್ದಲ್ಲಿ ಆ ಕುರಿತು ಸೆಕ್ಷನ್‌ 135ರ ಅಡಿ ಕ್ರಮ ಜರುಗಿಸಲು ವಿದ್ಯುತ್‌ ಇಲಾಖೆಗೆ ಯಾವುದೇ ನಿರ್ಬಂಧವಿಲ್ಲ. ವಿದ್ಯುತ್‌ ಕಾಯ್ದೆಯಡಿ ಸ್ಥಾಪನೆಯಾದ ವಿಶೇಷ ನ್ಯಾಯಾಲಯ ಬಿಟ್ಟು ಯಾವುದೇ ಇತರೆ ನ್ಯಾಯಾಲಯ ಸಹ ವಿದ್ಯುತ್‌ ಕಾಯ್ದೆಯಡಿ ಅಪರಾಧಗಳನ್ನು ವಿಚಾರಣೆಗೆ ಪರಿಗಣಿಸಲು (ಕಾಗ್ನಿಜೆನ್ಸ್‌ ಸ್ವೀಕರಿಸಲು) ಸಾಧ್ಯವಿಲ್ಲ. ಈ ನ್ಯಾಯಾಲಯವೇ ವಿದ್ಯುತ್‌ ಕಳವು ಅಪರಾಧಕ್ಕೆ ಸಂಬಂಧಿಸಿದ ಸಿವಿಲ್‌ ಹೊಣೆಗಾರಿಕೆ ಮತ್ತು ಕ್ರಿಮಿನಲ್‌ ಹೊಣೆಗಾರಿಕೆ ಎರಡರ ಬಗ್ಗೆ ವಿಚಾರಣೆ ನಡೆಸುವ ಜವಾಬ್ದಾರಿ ಹೊಂದಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಅಲ್ಲದೆ, ಅರ್ಜಿದಾರರ ಮಿಲ್‌ಗಳಿಗೆ ಜೆಸ್ಕಾಂ ವಿಚಕ್ಷಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅರ್ಜಿದಾರರು ವಿದ್ಯುತ್‌ ಕಳ್ಳತನ ಮಾಡಿರುವುದು ಸ್ಪಷ್ಟವಾಗಿ ತಿಳಿದು ಬಂದಿದೆ. ಎಫ್‌ಐಆರ್‌ ದಾಖಲಾದ ನಂತರವೂ ಮೌಲ್ಯಮಾಪನ ಮಾಡಿ ಅಗತ್ಯ ಶುಲ್ಕ ಪಾವತಿಸಲು ನೋಟಿಸ್‌ ಸಹ ಅರ್ಜಿದಾರರಿಗೆ ನೀಡಲಾಗಿದೆ. ಆದರೆ, ಮೌಲ್ಯಮಾಪನ ಮಾಡಿದಷ್ಟು ಶುಲ್ಕ ಪಾವತಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ವಿಶೇಷ ನ್ಯಾಯಾಲಯದ ನೋಟಿಸ್‌ ನೀಡಿದರೂ ಅರ್ಜಿದಾರರು ವಿಚಾರಣೆಗೆ ಹಾಜರಾಗಿಲ್ಲ. ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿ, ಅವರನ್ನು ವಿಚಾರಣೆಗೆ ಕರೆ ತರಲಾಗಿತ್ತು. ಈ ನಡಾವಳಿಯಿಂದ 2016ರಲ್ಲಿ ಆರಂಭವಾದ ವಿಚಾರಣೆಯನ್ನು ಒಂದಲ್ಲಾ ಒಂದು ನೆಪ ಹೇಳಿ ವಿಳಂಬ ಮಾಡಲು ಅರ್ಜಿದಾರರು ಬಯಸಿದ್ದಾರೆ. ವಿದ್ಯುತ್ ಕಳ್ಳತನವಾಗಿಲ್ಲ ಎಂದು ದೃಢಪಡಿಸುವ ಜವಾಬ್ದಾರಿ ಹೊಂದಿದ್ದ ಅರ್ಜಿದಾರರು, ಅಂತಹ ಯಾವುದೇ ದಾಖಲೆ ಹೈಕೋರ್ಟ್‌ಗೆ ಒದಗಿಸಿಲ್ಲ. ಇದರಿಂದ ಅವರ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಪ್ರಕರಣದ ವಿವರ:

ಜೆಸ್ಕಾಂ ಅಧಿಕಾರಿಗಳು 2016ರ ಮೇ 24ರಂದು ಹಮೀದ್‌ ಅವರ ಕುಟುಂಬದ ಒಡೆತನಕ್ಕೆ ಸೇರಿದ ಫ್ಲೋರ್‌ ಮಿಲ್‌ (ಹಿಟ್ಟಿನ ಗಿರಣಿ) ಮತ್ತು ಸಾ ಮಿಲ್‌ (ಮರದ ಹಲಗೆ ಕೊಯ್ಯುವ ಕಾರ್ಖಾನೆ) ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಿಲ್‌ನಲ್ಲಿ ವಿದ್ಯುತ್‌ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಕೃತ್ಯದಿಂದ ಜೆಸ್ಕಾಂಗೆ 5,45,134 ರು. ನಷ್ಟ ಅನುಭವಿಸಿರುವುದು ತಿಳಿದುಬಂದಿತ್ತು.

ಇದರಿಂದ ಅರ್ಜಿದಾರರ ವಿರುದ್ಧ ಜೆಸ್ಕಾಂ ವಿಚಕ್ಷಣಾ ಪೊಲೀಸ್‌ ಠಾಣೆಯಲ್ಲಿ ವಿದ್ಯುತ್‌ ಕಾಯ್ದೆ ಸೆಕ್ಷನ್‌ 135ರ ಅಡಿ ದೂರು ದಾಖಲಿಸಲಾಗಿತ್ತು. ಅದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರ ವಿರುದ್ಧದ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿ (ಕಾಗ್ನಿಜೆನ್ಸ್‌ ಸ್ವೀಕರಿಸಿ) ಅರ್ಜಿದಾರರಿಗೆ ಸಮನ್ಸ್‌ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು (ವಿಶೇಷ ನ್ಯಾಯಾಲಯ) 2022ರ ಅ.23ರಂದು ಆದೇಶಿಸಿತ್ತು.

ನಂತರ ರಾಜೀ ಸಂಧಾನ ಮೂಲಕ ಲೋಕ ಅದಾಲತ್‌ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳಲು ಸೂಚಿಸಿ ಅರ್ಜಿದಾರರಿಗೆ ವಿಶೇಷ ನ್ಯಾಯಾಲಯ 2022ರ ನ.7ರಂದು ನೋಟಿಸ್‌ ಜಾರಿ ಮಾಡಿತ್ತು. ರಾಜೀ ಸಂಧಾನ ಮೂಲಕ ಬಗೆಹರಿಸಿಕೊಳ್ಳಲು ಒಪ್ಪದ ಅರ್ಜಿದಾರರು, ಅಂತಿಮವಾಗಿ ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.