ಔಷಧಗಳು, ರಕ್ತದ ಮಾದರಿ ಪರೀಕ್ಷಾ ಕಿಟ್‌ ಸೇರಿ ಅಗತ್ಯ ವೈದ್ಯಕೀಯ ಪರಿಕರವನ್ನು ಸೂಕ್ತ ಸಮಯಕ್ಕೆ ಸುರಕ್ಷಿತವಾಗಿ ಡ್ರೋನ್‌ ಮೂಲಕ ಸಾಗಿಸುವ ಪ್ರಾಯೋಗಿಕ ಯೋಜನೆಯನ್ನು ನಾರಾಯಣ ಹೆಲ್ತ್‌ನ ಪಾಲುದಾರಿಕೆಯೊಂದಿಗೆ ಏರ್‌ಬೌಂಡ್‌ ಕಂಪನಿ ಕೈಗೊಂಡಿದೆ.

ಬೆಂಗಳೂರು : ಔಷಧಗಳು, ರಕ್ತದ ಮಾದರಿ ಪರೀಕ್ಷಾ ಕಿಟ್‌ ಸೇರಿ ಅಗತ್ಯ ವೈದ್ಯಕೀಯ ಪರಿಕರವನ್ನು ಸೂಕ್ತ ಸಮಯಕ್ಕೆ ಸುರಕ್ಷಿತವಾಗಿ ಡ್ರೋನ್‌ ಮೂಲಕ ಸಾಗಿಸುವ ಪ್ರಾಯೋಗಿಕ ಯೋಜನೆಯನ್ನು ನಾರಾಯಣ ಹೆಲ್ತ್‌ನ ಪಾಲುದಾರಿಕೆಯೊಂದಿಗೆ ಏರ್‌ಬೌಂಡ್‌ ಕಂಪನಿ ಕೈಗೊಂಡಿದೆ. ಈ ಮೂಲಕ ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ಆಸ್ಪತ್ರೆಗೆ ಕಿಟ್‌, ಔಷಧಗಳನ್ನು ಪೂರೈಸಲಾಗುತ್ತದೆ.

2026ರಲ್ಲಿ ಮಾರುಕಟ್ಟೆಗೆ ಜಾರಿಗೆ ತರುವ ಸಿದ್ಧತೆಯೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಬಳಿಕ ಮುಂದೆ ರಾಜ್ಯಾದ್ಯಂತ ಈ ಡ್ರೋನ್‌ ಡೆಲಿವರಿಯನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುಂತೆ ಮಾಡಲಾಗುವುದು ಎಂದು ಏರ್‌ಬೌಂಡ್ ಸಂಸ್ಥೆ ತಿಳಿಸಿದೆ.

60 ಕಿ.ಮೀ. ವೇಗ:

ಕೇವಲ 2.5 ಕೆ.ಜಿ. ತೂಕ ಹೊಂದಿರುವ ಈ ಡ್ರೋನ್‌ 1 ಕೆ.ಜಿ. ತೂಕದ ವಸ್ತುಗಳನ್ನು ಡೆಲಿವರಿ ಮಾಡಲು ಶಕ್ತವಾಗಿದೆ. ಗಂಟೆಗೆ 60 ಕಿ,ಮೀ. ವೇಗದಲ್ಲಿ ಸಂಚರಿಸುವ ಹಾಗೂ 40 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರಲಿದೆ. 400 ಮೀಟರ್‌ ಎತ್ತರದವರೆಗೂ ಈ ಡ್ರೋನ್‌ ಹಾರಾಟ ನಡೆಸುತ್ತದೆ. ಡ್ರೋನ್‌ಗೆ ಅಳವಡಿಸಿರುವ ವಿಶೇಷ ರುದ್ರ ಎಂಬ ಸಾಫ್ಟ್‌ವೇರ್ ಯಾವುದೇ ವೈದ್ಯಕೀಯ ಪರಿಕರವನ್ನು ಸುರಕ್ಷಿತವಾಗಿಟ್ಟುಕೊಂಡು ಡೆಲಿವರಿ ಮಾಡಲು ನೆರವಾಗುತ್ತದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್‌ಬೌಂಡ್‌ನ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್, ಸಂಚಾರ ದಟ್ಟಣೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಅಗತ್ಯ ವಸ್ತುಗಳನ್ನು ತಲುಪಿಸುವುದು ಕಷ್ಟಕರ. ಹೀಗಾಗಿ ಡ್ರೋನ್‌ ಡೆಲಿವರಿ ಯೋಜನೆ ಚಾಲ್ತಿಗೆ ತರಲು ಹೆಜ್ಜೆ ಇಟ್ಟಿದ್ದೇವೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ವಿತರಣಾ ಸಮಯವನ್ನು ಗಮನಾರ್ಹವಾಗಿ ಇದು ಕಡಿಮೆ ಮಾಡುತ್ತದೆ ಎಂದರು.

ರಕ್ತದ ಮಾದರಿ, ಪರೀಕ್ಷಾ ಕಿಟ್‌ ಮತ್ತು ಅಗತ್ಯ ಸರಬರಾಜು ಒಳಗೊಂಡಂತೆ ದಿನಕ್ಕೆ 10 ದೈನಂದಿನ ವೈದ್ಯಕೀಯ ವಿತರಣೆ ಪೂರ್ಣಗೊಳಿಸಲು ನಾರಾಯಣ ಹೆಲ್ತ್‌ನೊಂದಿಗೆ ಮೂರು ತಿಂಗಳ ಪ್ರಾಯೋಗಿಕ ಯೋಜನೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಿಧಿ ಸಂಗ್ರಹ:

ಯೋಜನೆಗೆ ಹುಂಬಾ ವೆಂಚರ್ಸ್‌, ಲೈಟ್‌ಸ್ಪೀಡ್‌ನ, ಟೆಸ್ಲಾ, ಅಂಡುರಿಲ್ ಮತ್ತು ಆಥರ್ ಎನರ್ಜಿಯಂಥ ಸಂಸ್ಥೆಗಳು ಹೂಡಿಕೆ ಮಾಡಿವೆ. ಈವರೆಗೂ 8.65 ಮಿಲಿಯನ್‌ ಡಾಲರ್‌ ನಿಧಿ ಸಂಗ್ರಹವಾಗಿದೆ. ಏರ್‌ಬೌಂಡ್ ಒಟ್ಟು 10 ಮಿಲಿಯನ್‌ ಡಾಲರ್‌ಗಿಂತಲೂ ಅಧಿಕ ನಿಧಿ ಸಂಗ್ರಹತ್ತ ದಾಪುಗಾಲು ಇಟ್ಟಿದೆ. ತಂತ್ರಜ್ಞಾನವನ್ನು ಪರಿಷ್ಕರಿಸಲು ಸಹ ಯೋಜಿಸಿದ್ದು, 2026 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ ಎಂದು ಹೇಳಿದರು.

ನಾರಾಯಣ ಹೆಲ್ತ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಡಾ.ದೇವಿ ಶೆಟ್ಟಿ ಮಾತನಾಡಿ, ಡ್ರೋನ್‌ ಮೂಲಕ ವೈದ್ಯಕೀಯ ಉಪಕರಣ ಪೂರೈಕೆ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ರೋಗಿಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ತಂತ್ರಜ್ಞಾನ ಬಳಸಿಕೊಳ್ಳುವ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಈ ಕ್ರಮ ಜೀವ ಉಳಿಸುವ ಕಾರ್ಯದಲ್ಲಿ ಹೆಚ್ಚು ನೆರವಾಗುತ್ತದೆ ಎಂದರು.