ಬೆಂಗಳೂರು ಬಿಟ್ಟು ಹೋಗ್ತೀನೆಂದವರು ಹೋಗ್ಲಿ ನೋಡೋಣ, ಅಮೇರಿಕಾದ ವೀಸಾ ಸಮಸ್ಯೆ ನಂತರ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಬೆಂಗಳೂರೇ ಬೇಕೆಂದು ಇಲ್ಲಿಯೇ ಭೂಮಿ ಖರೀದಿಸುತ್ತಿವೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ರಸ್ತೆಗುಂಡಿ, ಟ್ರಾಫಿಕ್ ಸಮಸ್ಯೆಗಳನ್ನು ಒಪ್ಪಿಕೊಂಡರು.
ಐಟಿ ಕಂಪನಿಯ ಅವರಾರೋ ಬೆಂಗಳೂರು ಬಿಟ್ಟು ಹೋಗ್ತೀನಿ ಅಂತಾ ಹೇಳ್ತಿದ್ದ, ಹೋಗೋಕೆ ಹೇಳಿ. ಯಾರೂ ಹೋಗುವುದಿಲ್ಲ ಎಂಬುದು ನಮಗೆ ಖಚಿತವಾಗಿದೆ. ನಿಮಗೆ ಗೊತ್ತಿಲ್ಲ, ಕಳೆದ 15 ದಿನಗಳಿಂದ ಅಮೇರಿಕಾದ ವಿಸಾ ಸಮಸ್ಯೆ ಆದಾಗಿನಿಂದ ಎಲ್ಲ ಅಂತಾರಾಷ್ಟ್ರೀಯ ಕಂಪನಿಗಳು ಸ್ವಂತ ಕಟ್ಟಡ ಅಥವಾ ಭೂಮಿ ಖರೀದಿಸಿ ಇಲ್ಲಿ ತಮ್ಮ ಸ್ವಂತ ಕಚೇರಿಗಳಲ್ಲಿ ಸಂಸ್ಥೆಗಳನ್ನು ನಡೆಸಲು ಮುಂದಾಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ನಡೆದ ನ್ಯೂಸ್ ಅವರ್ ಸ್ಪೆಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಕಂಪನಿ ನಡೆಸುತ್ತಿದ್ದವರು, ಈಗ ಸ್ವಂತ ಭೂಮಿ ಖರೀದಿ ಮಾಡುತ್ತಿದ್ದಾರೆ. ನಾನು ನಗರಾಭಿವೃದ್ಧಿ ಸಚಿವನಾದ ನಂತರ ಬೆಂಗಳೂರಿನ ಭೂಮಿ ಬೆಲೆ ಶೇ.30 ಹೆಚ್ಚಳವಾಗಿದೆ.
ಅಕ್ಕಪಕ್ಕದ ರಾಜ್ಯಗಳ ರಾಜಕಾರಣಿಗಳು ಬೆಂಗಳೂರಿನ ಕೈಗಾರಿಕೋದ್ಯಮಿಗಳು ಹಾಗೂ ಐಟಿ ಕಂಪನಿಗಳನ್ನು ನಮ್ಮ ವಿಜಯವಾಡಕ್ಕೆ ಬನ್ನಿ ಎಂದು ಕರೆಯುತ್ತಾರೆ. ಇದನ್ನು ನೋಡಿದರೆ ಬೇಜಾರಾಗೊಲ್ಲವಾ? ಎಂದು ಕೇಳಿದ್ದಕ್ಕೆ ನಾನು ಅಲ್ಲಿಗೆ ಹೋಗಿ ನೋಡಿಕೊಂಡು ಬಂದಿಲ್ಲವಾ? ಅಲ್ಲಿ ಎಂತಹ ಮೂಲ ಸೌಕರ್ಯಗಳೂ ಇಲ್ಲ. ವಿಜಯವಾಡವು ಬೆಂಗಳೂರಿನ ಒಂದು ಸಣ್ಣ ಕಾರ್ಪೋರೇಷನ್‌ಗೂ ಸಮವಲ್ಲ ಎಂದು ಹೇಳಿದರು.
ದೆಹಲಿಯ ನಮ್ಮನೆ ಮುಂದೆಯೇ 100 ರಸ್ತೆಗುಂಡಿಗಳಿವೆ:
ಎಲ್ಲರೂ ಬೆಂಗಳೂರಿನ ರಸ್ತೆಗುಂಡಿ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿನ ರಸ್ತೆಗುಂಡಿಯಂತೆ ಎಲ್ಲ ನಗರದಲ್ಲಿಯೂ ರಸ್ತೆಗುಂಡಿಗಳು, ಫುಟ್‌ಪಾತ್ ಸಮಸ್ಯೆ, ಕೇಬಲ್ ಸೇರಿ ಹಲವು ಸಮಸ್ಯೆಗಳು ಇದ್ದೇ ಇರುತ್ತವೆ. ದೆಹಲಿಯಲ್ಲಿರುವ ನಮ್ಮ ಮನೆಯ ಮುಂದೆಯೂ ಕೂಡ 100 ರಸ್ತೆಗುಂಡಿಗಳಿವೆ. ಅದರ ಬಗ್ಗೆ ಸ್ವತಃ ನಾನೇ ನಿಮಗೆ ಸರ್ವೇ ಮಾಡಿದ ವಿಡಿಯೋ, ಫೋಟೋ ಕೊಡ್ತೇನೆ. ಆದರೆ, ಬೆಂಗಳೂರಿನಲ್ಲಿ ನ್ಯೂಸ್ ಚಾನಲ್‌ಗಳು ಹಾಗೂ ಸೋಶಿಯಲ್ ಮೀಡಿಯಾಗಳು ಹೆಚ್ಚು ಸುದ್ದು ಮಾಡಿ ವೈರಲ್ ಮಾಡುತ್ತಿವೆ ಎಂದು ಹೇಳಿದರು.
ರಾಜ್ಯಕ್ಕೆ ಮೊದಲ ಕಾಂಕ್ರೀಟ್ ರಸ್ತೆ ತಂದಿದ್ದೇ ನಾನು:
ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಆರಂಭ ಮಾಡಿದ್ದು ನಾನೇ. ಇದನ್ನು ನಾನು ಮುಂಬೈನಲ್ಲಿ ನೋಡಿಕೊಂಡು ಬಂದು ಮೊದಲು ಮಂಗಳೂರಿನಲ್ಲಿ ಆರಂಭಿಸಿದೆ. ಅದಾದ ನಂತರ ಬೆಂಗಳೂರಿನಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾರಂಭಿಸಿದೆ. ಇದೀಗ ಬೆಂಗಳೂರಿನಲ್ಲಿ ಶೇ.30 ಭಾಗದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿದರೆ ರಸ್ತೆಗುಂಡಿ ಆಗುವುದನ್ನು ತಡೆಯುವುದು ಮಾತ್ರವಲ್ಲ, ಬರೋಬ್ಬರಿ 35 ವರ್ಷಗಳ ಕಾಲ ಈ ರಸ್ತೆ ದುರಸ್ತಿಗೆ ಬರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನನ್ನ ಮಗಳು ಕೂಡ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅಷ್ಟೊಂದು ಟ್ರಾಫಿಕ್ ಆಗುವ ಬಗ್ಗೆ ಸ್ವತಃ ನನ್ನ ಮಗಳೇ ಕೇಳುತ್ತಾರೆ. ಇದು ದೊಡ್ಡ ನಗರದಲ್ಲಿ ಸರ್ವೇ ಸಾಮಾನ್ಯವಾಗುತ್ತದೆ. ಮನೆಗೆ ಬರೋದು ಯಾಕೆ ಇಷ್ಟು ಲೇಟ್ ಆಯ್ತು ಎಂದು ಕೇಳಿದ್ದಕ್ಕೆ, ನಿಮ್ಮ ರೋಡ್‌ನಿಂದಲೇ ಲೇಟಾಯ್ತು ಎಂದು ಹೇಳ್ತಾರೆ. ಇದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
