ಎಸ್ಐಟಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆ ಅಥವಾ ಮೇಲ್ಮಟ್ಟದ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್‌) 2023ರ ಕಲಂ 2 (1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿ ಎಂದು ಘೋಷಿಸಲಾಗಿದೆ.

ಬೆಂಗಳೂರು (ಆ.09): ದಶಕಗಳ ಹಿಂದೆ ಅನಧಿಕೃತವಾಗಿ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹೂತಿಟ್ಟಿದ್ದಾರೆ ಎನ್ನಲಾದ ಅಪರಿಚಿತ ಮೃತದೇಹಗಳ ಶೋಧನಾ ಕಾರ್ಯ ಮುಂದುವರಿದಿರುವ ನಡುವೆಯೇ ಪ್ರಕರಣದ ತನಿಖೆಗಿಳಿದಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪೊಲೀಸ್ ಠಾಣಾ ಮಾನ್ಯತೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಎಸ್ಐಟಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆ ಅಥವಾ ಮೇಲ್ಮಟ್ಟದ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್‌) 2023ರ ಕಲಂ 2 (1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿ ಎಂದು ಘೋಷಿಸಲಾಗಿದೆ. ಈ ಕಾಯ್ದೆಯನ್ವಯ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಅಧಿಸೂಚಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಒಳಾಡಳಿತ ಇಲಾಖೆಯ (ಅಪರಾಧಗಳು) ಎಸ್‌.ಅಂಬಿಕಾ ಆದೇಶಿಸಿದ್ದಾರೆ.

ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮುತ್ತ ನಡೆದಿದೆ ಎನ್ನಲಾಗಿರುವ ಅಪರಾಧ ಕೃತ್ಯಗಳು ಹಾಗೂ ಅನಧಿಕೃತ ಮೃತದೇಹಗಳ ಅಂತ್ಯಕ್ರಿಯೆ ಸಂಬಂಧ ಸಲ್ಲಿಕೆಯಾಗುವ ದೂರುಗಳನ್ವಯ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನು ಎಸ್‌ಐಟಿ ಪಡೆದಿದೆ. ಅಲ್ಲದೆ, ಪ್ರಕರಣದ ಕುರಿತು ತನಿಖೆ ನಡೆಸಿ ಆರೋಪಪಟ್ಟಿ ಅಥವಾ ಅಂತಿಮ ವರದಿ ಸಲ್ಲಿಸುವ ನಿರ್ಣಯದ ಅಧಿಕಾರವು ಎಸ್‌ಐಟಿ ಲಭಿಸಿದಂತಾಗಿದೆ. ಈವರೆಗೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿತ್ತು. ಇನ್ಮುಂದೆ ನೇರವಾಗಿಯೇ ದೂರು ದಾಖಲಿಸಿ ತನಿಖೆ ಕೈಗೆಕೊಳ್ಳುವ ಅವಕಾಶ ಎಸ್ಐಟಿಗೆ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪ ಪಟ್ಟಿಗಳಿಗೆ ಮಾನ್ಯತೆ: ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಅಧಿಕಾರವಿಲ್ಲದ ಕಾರಣಕ್ಕೆ ಸಿಸಿಬಿ ಸೇರಿ ಇತರೆ ವಿಭಾಗಗಳು ಸಲ್ಲಿಸಿದ್ದ ಆರೋಪಪಟ್ಟಿಗಳನ್ನು ನ್ಯಾಯಾಲಯವು ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಮುಂದೆ ಕಾನೂನು ತೊಡಕು ಎದುರಾಗದಂತೆ ಮುಂಜಾಗ್ರತೆವಹಿಸಿ ಎಸ್‌ಐಟಿಗೆ ಠಾಣಾ ಮಾನ್ಯತೆ ನೀಡಿದೆ ಎಂದು ತಿಳಿದು ಬಂದಿದೆ.