ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಬಂಧಿಸಿರುವುದಕ್ಕೆ ಪ್ರತಿಭಟನಾಕಾರರು ಸ್ವಾಗತ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುನೀತ್ ಕೆರೆಹಳ್ಳಿಯವರನ್ನು ಕೊಡಗಿನಿಂದ ಹೊರಗೆ ಕಳುಹಿಸಿ ನೊಟೀಸ್ ಜಾರಿ ಮಾಡಲಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.21): ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹಿಂದೂಪರ ಸಂಘಟನೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕುಶಾಲನಗರದ ಮಾರಿಯಮ್ಮ ದೇವಾಲಯದ ಬಳಿಯಿಂದ ಬೃಹತ್ ಮೆರವಣಿಗೆ ಆರಂಭಿಸಿದರು. ಮಾರಿಯಮ್ಮ ದೇವಾಲಯದ ಬಳಿಯಿಂದ ಹೊರಟು ಬಿಎಂ ರಸ್ತೆಯಲ್ಲಿ ಒಂದುವರೆ ಕಿಲೋ ಮೀಟರ್ ಗೂ ಹೆಚ್ಚು ದೂರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಮುಂಭಾಗದಲ್ಲೇ ಇರುವ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು. ಇದರಿಂದ ಮೈಸೂರು, ಹಾಗೂ ಹಾಸನದ ಕಡೆಗೆ ತೆರಳುವ ಬಸ್ಸುಗಳ ಸಂಚಾರಕ್ಕೂ ಸ್ವಲ್ಪ ಅಡ್ಡಿಯಾಯಿತು.
ಈ ಸಂದರ್ಭ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿವಿಧ ಮುಖಂಡರು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದರ ನಡುವೆ ಪ್ರತಿಭಟನೆಗೆ ಭಾಗವಹಿಸಿದಂತೆ ಸೂಚಿಸಿದ್ದರೂ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಗಣಪತಿ ದೇವಸ್ಥಾನದ ಜಗತಿ ಮೇಲೆ ನಿಂತು ಪ್ರತಿಭಟನಾಕಾರರ ಉದ್ದೇಶಿಸಿ ಪುನೀತ್ ಕೆರೆಹಳ್ಳಿ ಮಾತನಾಡಲು ಮುಂದಾಗುತ್ತಿದ್ದಂತೆ ಕುಶಾಲನಗರ ಪೊಲೀಸರು ತಡೆದರು. ಸ್ಥಳದಲ್ಲಿಯೇ ಇದ್ದ ಕೊಡಗು ಎಎಸ್ಪಿ ದಿನೇಶ್ ಅವರು ಕೂಡ ಮಾತನಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೊಡಗು ಜಿಲ್ಲೆಗೆ ನೀವು ಬರದಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ನೀವು ಇಲ್ಲಿಂದ ಹೊರಗೆ ಹೋಗಿ ಎಂದು ತಾಕೀತು ಮಾಡಿದರು. ಇದು ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ, ತಳ್ಳಾಟಕ್ಕೆ ಕಾರಣವಾಯಿತು.

ವೇದಿಕೆ ಮೇಲಿಂದಲೂ ಕೆಳಗಿಸಿದ ಪೊಲೀಸರು ನಂತರ ವಶಕ್ಕೆ ಪಡೆದು ಕೊಡಗು ಗಡಿಯನ್ನು ದಾಟಿಸಿ ಮೈಸೂರು ಜಿಲ್ಲೆಯ ಬೈಲುಕೊಪ್ಪ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಕೊಡಗು ಎಎಸ್ಪಿ ದಿನೇಶ್ ಅವರು ಪುನೀತ್ ಕೆರೆಗಳಿಗೆ ನೊಟೀಸ್ ಜಾರಿ ಮಾಡಿ ಕೊಡಗಿಗೆ ಬರದಂತೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಮಾತನಾಡಿದ ಪುನೀತ್ ಕೆರೆಹಳ್ಳಿ ನಮ್ಮ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಅವರಿಗೆ ನೋಟಿಸ್ ಮಾಡುವ ತಾಕತ್ತು ಪೊಲೀಸರಿಗೆ ಇಲ್ಲ. ಬದಲಾಗಿ ನಮ್ಮ ಧಾರ್ಮಿಕ ಕ್ಷೇತ್ರದ ಪರವಾಗಿ ಜನರನ್ನು ಜಾಗೃತಿಗೊಳಿಸಲು ಬಂದಿರುವ ನನ್ನ ವಿರುದ್ಧ ನೊಟೀಸ್ ಜಾಡಿದ್ದಾರೆ. ನನಗೆ ಕೊಡಗು ಜಿಲ್ಲೆಗೆ ಬಾರದಂತೆ ಸೂಚಿಸಿದ್ದಾರೆ. ಇದು ಹೆಚ್ಚು ದಿನ ನಡೆಯಲ್ಲ ಎಂದು ಪುನೀತ್ ಕೆರೆಹಳ್ಳಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದಂತೆ ಮಹೇಶ್ ಶೆಟ್ಟಿ ತಿಮ್ಮರೋಡಿಯೂ ಶವವನ್ನು ಹೂತಿದ್ದಾನೆ. ಅದನ್ನು ಕೂಡ ಎಸ್ಐಟಿ ಉತ್ಖನನ ಮಾಡಲಿ ಎಂದು ಪುನೀತ್ ಕೆರೆಹಳ್ಳಿ ಒತ್ತಾಯಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪ್ರಚಾರದ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮ್ಮರೋಡಿಯನ್ನು ಕಳೆದ 3 ವರ್ಷಗಳ ಹಿಂದೆಯೇ ಬಂಧಿಸಬೇಕಾಗಿತ್ತು. ಆದರೆ ಈಗಲಾದರೂ ಬಂಧಿಸಿರುವುದಕ್ಕೆ ಸ್ವಾಗತಿಸುತ್ತೇನೆ. ಯಾರನ್ನಾದರೂ ಬಾಯಿಗೆ ಬಂದಂತೆ ಬೈಯುತ್ತಿದ್ದರು, ಅತ್ಯಂತ ಕೆಳಮಟ್ಟದ ಭಾಷೆ ಬಳಸಿ ಬೈಯುತ್ತಿದ್ದರು. ಅವನ ಮೇಲೂ ಆರೋಪಗಳಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಹೇಶ್ ತಿಮ್ಮರೋಡಿ ಕೂಡ ಶವ ಹೂತಿಟ್ಟಿದ್ದಾನೆ ಎನ್ನುವ ಆರೋಪವಿದೆ. ಅದು ಕೂಡ ಉತ್ಖನನ ಆಗಬೇಕು. ಎಸ್ಐಟಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವಂತೆ ಮಾಡುವಂತಿಲ್ಲ. ಎಸ್ಐಟಿ ಅದನ್ನು ಉತ್ಖನನ ಮಾಡಿಸಲಿ. ಇಲ್ಲದಿದ್ದರೆ ಅದನ್ನು ಉತ್ಖನನ ಮಾಡದಿದ್ದರೆ ಉಜಿರೆ ಚಲೋಗೆ ಕರೆಕೊಡುತ್ತೇವೆ. ನಾವು ಮತ್ತೊಮ್ಮೆ ಉಜಿರೆಗೆ ಹೋಗುತ್ತೇವೆ. ತಿಮ್ಮರೋಡಿ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೊಮ್ಮೆ ಉಜಿರೆ ಚಲೋ ಮಾಡ್ತೇವೆ. ಇಡೀ ರಾಜ್ಯದ ಜನತೆ ತಿಮ್ಮರೋಡಿ ಮನೆಗೆ ಮುತ್ತಿಗೆ ಹಾಕ್ತೇವೆ ಎಂದು ಹೇಳಿದ್ದಾರೆ.
