ಸೌಜನ್ಯ ಕೊಲೆ ಪ್ರಕರಣ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿದ್ದು, ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಕಡೆಯವರ ಮೇಲೆ ಆರೋಪ-ಪ್ರತ್ಯಾರೋಪಗಳ ನಡುವೆ ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್ ಎಫ್‌ಐಆರ್ ದಾಖಲು.
ಧರ್ಮಸ್ಥಳ (ಆಗಸ್ಟ್.7): ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡುತ್ತಿದ್ದ ಕುಡ್ಲ ರ‍್ಯಾಂಪೇಜ್‌ನ ಅಜಯ್ ಅಂಚನ್ ಸೇರಿದಂತೆ ಮೂವರು ಯೂಟ್ಯೂಬರ್‌ಗಳ ಮೇಲೆ ಆಗಸ್ಟ್ 6, 2025ರಂದು ಪಾಂಗಾಲ ಕ್ರಾಸ್‌ನಲ್ಲಿ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣ ಇದೀಗ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಮೇಲೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಠಾಣೆಗಳಲ್ಲಿ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ.
ಮಹೇಶ್ ಶೆಟ್ಟಿ ತಿಮರೋಡಿ,ಮಟ್ಟಣ್ಣನವರ್ ವಿರುದ್ದ ಎಫ್ಐಆರ್
ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ (32) ಎಂಬವರ ದೂರಿನ ಆಧಾರದ ಮೇಲೆ ಸೌಜನ್ಯ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗಿರೀಶ್ ಮಟ್ಟಣ್ಣನವರ್ ಅವರು ಅಪರಾಧಿಕ ಕೃತ್ಯಗಳಿಗೆ ದುಷ್ಪ್ರೇರಣೆ ನೀಡುವಂತೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣವನ್ನು ಬಿಎನ್ಎಸ್ 57, 296, ಮತ್ತು 190 (2023) ಅಡಿಯಲ್ಲಿ ದಾಖಲಿಸಲಾಗಿದೆ. ಇದೇ ರೀತಿ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಪ್ರಾದೇಶಿಕವಾಗಿ ಜನರ ನಡುವೆ ವೈಮನಸ್ಸು ಮತ್ತು ಸಾರ್ವಜನಿಕರಲ್ಲಿ ಅಪಾಯದ ಭೀತಿಯನ್ನುಂಟುಮಾಡುವಂತಹ ಹೇಳಿಕೆಗಳನ್ನು ಯೂಟ್ಯೂಬ್‌ನಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಬಿಎನ್ಎಸ್ 353(2) (2023) ಅಡಿಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀರ್ ಕೆರೆಹಳ್ಳಿ ವಿರುದ್ದವೂ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್
ಇದರ ಜೊತೆಗೆ, ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಜೆರೋಮ್ ಬರ್ಬೋಝಾ (37) ಎಂಬವರ ದೂರಿನ ಆಧಾರದ ಮೇಲೆ ಆರೋಪಿತ ಪುನೀತ್ ಕೆರೆಹಳ್ಳಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಯೂಟ್ಯೂಬ್‌ನಲ್ಲಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋಗೆ ಸಂಬಂಧಿಸಿದಂತೆ ಬಿಎನ್ಎಸ್ 296 (2023) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಿಂದ ಧರ್ಮಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸೌಜನ್ಯ ಕೊಲೆ ಪ್ರಕರಣದ ಸುತ್ತಲಿನ ವಿವಾದಗಳು ಮತ್ತು ಈ ದಾಳಿಯಿಂದ ಧರ್ಮಸ್ಥಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
