ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದಿರಬಹುದಾದ ಸಭೆಯೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿ ಮತ್ತು ವಸಂತ್ ಗಿಳಿಯಾರ್ ಕಾಣಿಸಿಕೊಂಡಿದ್ದು, ಧರ್ಮಸ್ಥಳ ವಿವಾದಕ್ಕೆ ಹೊಸ ತಿರುವು ನೀಡಿದೆ.
ಮೈಸೂರು(ಆ.29): ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದ ವಿಚಾರವಾಗಿ ಮೈಸೂರಿನಲ್ಲೂ ಸಭೆ ನಡೆದಿತ್ತೇ ಎಂಬ ಅನುಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಎರಡು ವರ್ಷ ಹಳೆಯ ಫೋಟೋದಿಂದ ಮತ್ತಷ್ಟು ತೀವ್ರಗೊಂಡಿದೆ. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಸರ್ಕಾರಿ ಅತಿಥಿಗೃಹದ ಬಳಿ ಎರಡು ವರ್ಷಗಳ ಹಿಂದೆ ತೆಗೆದ ಫೋಟೋವೊಂದನ್ನು ಪ್ರವೀಣ್ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ಮಹೇಶ್ ಶೆಟ್ಟಿ ತಿಮ್ಮರೋಡಿ ಜೊತೆಗೆ ವಸಂತ್ ಗಿಳಿಯಾರ್ ಕಾಣಿಸಿಕೊಂಡಿದ್ದಾರೆ.
ಈ ಫೋಟೋದೊಂದಿಗೆ ಪ್ರವೀಣ್ ಎಂಬುವವರು ಬರೆದಿರುವ ಪೋಸ್ಟ್‌ನಲ್ಲಿ, 'ಅಣ್ಣನ ಜೊತೆ ಮೈಸೂರಿನ ಜಲದರ್ಶಿನಿಯಲ್ಲಿ ಎರಡು ವರ್ಷದ ಹಿಂದೆ ಸತ್ಯಶೋದನೆ ವರದಿ ಆರಂಭದ ದಿನ' ಎಂದು ಉಲ್ಲೇಖಿಸಲಾಗಿದೆ. ಆದರೆ ಇಂದು ವಸಂತ್ ಗಿಳಿಯಾರ್ ತಿಮ್ಮರೋಡಿ ವಿರುದ್ಧ ಧ್ವನಿಯೆತ್ತಿ, ಧರ್ಮಸ್ಥಳದ ಪರವಾಗಿ ನಿಲುವು ವ್ಯಕ್ತಪಡಿಸಿರುವುದು ಈ ವಿಷಯಕ್ಕೆ ಹೊಸ ತಿರುವು ನೀಡಿದೆ. ಈ ಫೋಟೋ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಹೊರಗೆ ತೆಗೆದದ್ದು ಎಂದು ದೃಢಪಟ್ಟಿದ್ದು, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಭೆ ನಡೆದಿರುವ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಧರ್ಮಸ್ಥಳ ವಿರುದ್ಧ ಸಂಚಿನಲ್ಲಿ ಮಾಸ್ಟರ್ ಮೈಂಡ್ ರೀತಿ ತಿಮ್ಮರೋಡಿ ಕೆಲಸ ಮಾಡಿದ್ದಾರಾ?ಹಿಂದಿನಿಂದಲೂ ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆಗಳನ್ನ ನೀಡಿ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸದ್ಯ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ಈ ನಡುವೆ ಫೋಟೋ ವೈರಲ್ ಆಗಿರುವುದರಿಂದ, ತಿಮ್ಮರೋಡಿ ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಧರ್ಮಸ್ಥಳದ ವಿಷಯಕ್ಕೆ ಸಂಬಂಧಿಸಿದ ಸಭೆಯೊಂದನ್ನು ನಡೆಸಿದ್ದರೆ ಎಂಬ ಪ್ರಶ್ನೆ ಎದ್ದಿದೆ.
ವಸಂತ್ ಗಿಳಿಯಾರ್‌ರ ಈಗಿನ ನಿಲುವು ಮತ್ತು ಎರಡು ವರ್ಷ ಹಳೆಯ ಫೋಟೋದ ನಡುವಿನ ವೈರುಧ್ಯವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ತಿಮ್ಮರೋಡಿ ಅಥವಾ ವಸಂತ್ ಗಿಳಿಯಾರ್‌ರಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲವಾದರೂ, ಈ ಫೋಟೋ ಮತ್ತು ಅದರ ಹಿಂದಿನ ಕಥೆಯು ಧರ್ಮಸ್ಥಳ ವಿವಾದಕ್ಕೆ ಮತ್ತಷ್ಟು ತಿರುವುಗಳನ್ನು ತಂದಿದೆ. ಮುಂದಿನ ಕೆಲವು ದಿನಗಳಲ್ಲಿ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.
