ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲ ನೀಡಲು ಜೆಡಿಎಸ್ 'ಸತ್ಯ ಯಾತ್ರೆ' ಹಮ್ಮಿಕೊಂಡಿದೆ. ನೇತ್ರಾವತಿ ನದಿ ದಡದಿಂದ ಶ್ರೀ ಮಂಜುನಾಥನ ದೇವಾಲಯದವರೆಗೆ ಪಾದಯಾತ್ರೆ ನಡೆಸಿ, ಹೆಗ್ಗಡೆ ಅವರನ್ನು ಭೇಟಿ ಮಾಡಿ ನೈತಿಕ ಸ್ಥೈರ್ಯ ತುಂಬಲಾಗುವುದು.
ಮಂಡ್ಯ (ಆ.31): ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಆ.31ರಂದು ಜೆಡಿಎಸ್ ವತಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನದಿಂದ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಬಸ್‌ಗಳ ಮೂಲಕ ಧರ್ಮಸ್ಥಳಕ್ಕೆ ತೆರಳಿ ಬಳಿಕ ನೇತ್ರಾವತಿ ನದಿ ದಡದಿಂದ ಶ್ರೀ ಮಂಜುನಾಥನ ದೇವಾಲಯದವರೆಗೆ ಪಾದಯಾತ್ರೆ ನಡೆಸುತ್ತೇವೆ. ಅಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ನಡೆಸುತ್ತಿರುವ ಯಾತ್ರೆ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಇದರೊಳಗೆ ರಾಜಕಾರಣವನ್ನು ಬೆರೆಸುವುದೂ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಬುರುಡೆ ಪ್ರಕರಣ ಎನ್‌ಐಎಗೆ ವಹಿಸಿ:
ಬುರುಡೆ ಪ್ರಕರಣ ಸಂಘಟಿತ ಪಿತೂರಿಯಾಗಿದ್ದು, ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಸಂಚು ಕಂಡುಬರುತ್ತಿದೆ. ಪಿತೂರಿಗಾರರಿಗೆ ವಿದೇಶದಿಂದ ಹಣ ಹರಿದುಬರುತ್ತಿರುವ ಬಗ್ಗೆ ಮಾಹಿತಿ ಇದ್ದು, ಎನ್‌ಐಎ ತನಿಖೆಗೆ ವಹಿಸುವುದು ಸೂಕ್ತ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಆ ಷಡ್ಯಂತ್ರ ನಡೆಸಿದವರು ಯಾರು ಎನ್ನುವುದು ಹೊರಬರಬೇಕಿದೆ. ಅದು ಎಸ್‌ಐಟಿ ತನಿಖೆಯಿಂದ ಸಾಧ್ಯವಿಲ್ಲ. ಹಾಗಾಗಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಯಾವನೋ ಒಬ್ಬ ತಲೆಬುರುಡೆ ತಂದಾಗ ಅದರ ಎಫ್‌ಎಸ್‌ಎಲ್ ವರದಿಯನ್ನೇ ಪಡೆಯದೆ, ಸಿಎಂ ಸಿದ್ದರಾಮಯ್ಯ ಅವರು ದಿಢೀರ್ ಎಸ್‌ಐಟಿ ರಚನೆ ಮಾಡಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳುವಂತೆ ಇದು \Bಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್\B ಆಗಿ ಧರ್ಮಸ್ಥಳ ಪ್ರಕರಣದ ತನಿಖೆಗಿಳಿದಿದೆ. ಆದರೆ, ಇಡೀ ಕಾರ್ಯಾಚರಣೆಯಲ್ಲಿ ಎಸ್‌ಐಟಿಗೆ ಸಿಕ್ಕಿದ್ದು ಬರೀ ಮಣ್ಣು ಎಂದು ವ್ಯಂಗ್ಯವಾಡಿದರು.
