ಯಾರೋ ಕಟ್ಟಿದ ಗೂಡಲ್ಲಿ ಆಡಳಿತ ಮಾಡೋಕೆ ನೀವೇ ಬೇಕಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ದೇವನಹಳ್ಳಿ (ಆ.25): ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿಗಳು ಜನತಾದಳದ ಬಗ್ಗೆ ಲಘುವಾಗಿ ಮಾತಾಡಿದ್ದಕ್ಕೆ ಪ್ರತಿ ಉತ್ತರವಾಗಿ ನಮ್ಮ ಮನೆಯ ಮುಂದೆ ಅಧಿಕಾರಕ್ಕಾಗಿ ಸಹಕಾರ ಕೇಳಿ ಬಂದವರು ನೀವು. ಈಗ ಜನತಾಪಕ್ಷವೇ ಒಂದೆರಡು ಸೀಟುಗಳು ಪಡೆದು ಕಣ್ಮರೆಯಾಗಲಿದೆ ಎಂದಿದ್ದೀರಿ. ಆದರೆ ಯಾರೋ ಕಟ್ಟಿದ ಗೂಡಲ್ಲಿ ಆಡಳಿತ ಮಾಡೋಕೆ ನೀವೇ ಬೇಕಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಡಿಜಿಟಲ್ ಸದಸ್ಯತ್ವ ನೋಂದಣಿ ಮತ್ತು ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಸಂಪೂರ್ಣ ಆಶೀರ್ವಾದ ಪಡೆದ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಪಂಚ ಗ್ಯಾರಂಟಿಗಳನ್ನು ನೀಡಲು ವಿಫಲವಾಗಿದ್ದಾರೆ. ಮಹಿಳೆಯರಿಗೆ 2000 ರು. ನೀಡಲು ಯಾವುದಾದರೂ ಚುನಾವಣೆಗಳು ಬರಬೇಕು. ಮುಖ್ಯಮಂತ್ರಿ ಸೀಟು ಭದ್ರವಾಗಿರುವರೆಗೂ ಮಾತ್ರ ಕಾಂಗ್ರೆಸ್.
ಬಡವರ ಪರ ದಲಿತರ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಎಸ್‌ಟಿಪಿ/ಟಿಎಸ್‌ಪಿ ಹಣ ನುಂಗಿ ನೀರು ಕುಡಿದಿದೆ. ವಾಲ್ಮೀಕಿ ನಿಗಮದ ಹಣ ₹87 ಕೋಟಿ ಲಪಟಾಯಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿರುವ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಹೇಳಿದರು. ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ನಿಜ, ಆತಂಕ ಬೇಡ. ಈಗ ಸಂಪೂರ್ಣ ಆರೋಗ್ಯದಿಂದ ಇದ್ದಾರೆ. ಅವರ ಪರವಾಗಿ ರಾಜ್ಯದ ಜನತೆಯ ಸೇವೆ ಮಾಡಲು ಹೋರಾಡಲು ನಾನು ಸದಾ ಸಿದ್ಧ. ಅವರ 14 ತಿಂಗಳ ಕಾರ್ಯವೈಖರಿ ನಾಡಿನ ಜನರ ಹೃದಯದಲ್ಲಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಬಹುಮತದ ಮೂಲಕ ಶಕ್ತಿ ತುಂಬಲಿದ್ದಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ನಿಖಿಲ್ ಕುಮಾರಸ್ವಾಮಿಗೆ 250ಕ್ಕೂ ಹೆಚ್ಚು ಕಲಾತಂಡಗಳು ಕಳಶ ಹೊತ್ತ ಮಹಿಳೆಯರು, ಕ್ಷೇತ್ರದ ಗಣ್ಯರಿಂದ ಬೃಹತ್ ಹಣ್ಣಿನ ಹಾರಗಳಿಂದ ಅದ್ಧೂರಿ ಸ್ವಾಗತ ಕೋರಿ ಕೆಂಪೇಗೌಡ ಸರ್ಕಲ್‌ನಿಂದ ಮೈದಾನದ ವೇದಿಕೆವರೆಗೂ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ನಿಖಿಲ್‌ಗೆ ಜೆಡಿಎಸ್ ಕಾರ್ಯಕರ್ತರು ಬೆಳ್ಳಿ ಕತ್ತಿ ನೀಡಿ ಗೌರವಿಸಿದರು.
