ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ದೂರುದಾರ ತಪ್ಪೊಪ್ಪಿಕೊಂಡಿದ್ದಾನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿರುವ ದೂರುದಾರ, ತನಿಖೆಗೆ ಸಹಕರಿಸುತ್ತಿದ್ದಾನೆ. ಮಂಡ್ಯ ಮತ್ತು ತಮಿಳುನಾಡಿಗೂ ವಿಸ್ತರಿಸಿರುವ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುವುದಿದೆ.
ಬೆಂಗಳೂರು: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿಟ್ಟ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ಅಧಿಕಾರಿಗಳ ಮುಂದೆ ದೂರುದಾರ ತನ್ನ ಬಾಯಿಂದಲೇ ಆಘಾತಕಾರಿ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ ಮೌನವಾಗಿದ್ದ ದೂರುದಾರ, ಇದೀಗ ಎಲ್ಲಾ ಘಟನೆಗಳನ್ನು ವಿವರಿಸಿ ತನಿಖಾಧಿಕಾರಿಗಳಿಗೆ ಸಹಕರಿಸುತ್ತಿದ್ದಾನೆ. ಮೂಲತಃ ತನ್ನ ಸಹೋದರ ತನಾಸೆ ಎಂಬಾತನ ಮುಂದೆ ತಪ್ಪೊಪ್ಪಿಕೊಂಡಿರುವ ದೂರುದಾರ “ನಾನು ತಪ್ಪು ಮಾಡಿದ್ದೇನೆ” ಎಂದು ಹೇಳಿದ್ದಾನೆ. SIT ಅಧಿಕಾರಿಗಳಿಗೆ ಈಗ ಎಲ್ಲಾ ಸತ್ಯವನ್ನು ತಿಳಿಸಿದ್ದೇನೆ ಅಂದಿರುವ ದೂರುದಾರ. ಪೊಲೀಸ್ ತನಿಖಾಧಿಕಾರಿ ವಿಚಾರಣೆಯಲ್ಲಿಯೂ ಅದೇ ಹೇಳಿಕೆಯನ್ನು ನೀಡಿದ್ದೇನೆ. ಈಗ ಎಸ್‌ಐಟಿ ಅಧಿಕಾರಿಗಳ ಮುಂದೆ ನಿಂತು, ಈ ರೀತಿ ಮಾಡಿರುವುದು ತಪ್ಪು, ಎಲ್ಲ ಸತ್ಯವನ್ನು ಈಗಾಗಲೇ ಬಿಚ್ಚಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ.
ಮಂಡ್ಯ ಮತ್ತು ತಮಿಳುನಾಡಿಗೂ ವಿಸ್ತರಿಸಿದ SIT ತನಿಖೆ
ಧರ್ಮಸ್ಥಳದ ಈ ಶವ ಹೂತು ಪ್ರಕರಣ ಸ್ಥಳೀಯ ಮಟ್ಟದಲ್ಲೇ ಸೀಮಿತವಾಗಿರದೆ, ಮಂಡ್ಯ ಹಾಗೂ ತಮಿಳುನಾಡಿಗೂ ವಿಸ್ತರಿಸಿದೆ. ದೂರುದಾರನ ಹುಟ್ಟೂರಿನಲ್ಲಿ ಎಸ್‌ಐಟಿ ಅಧಿಕಾರಿಗಳು ತೀವ್ರವಾದ ತನಿಖೆ ನಡೆಸಿದ್ದಾರೆ. ಅಲ್ಲಿನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣದ ಹಿನ್ನಲೆಯಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಇದೇ ವೇಳೆ, ತಮಿಳುನಾಡಿನ ಚಿಕ್ಕರಸಿ ಪಾಳ್ಯಕ್ಕೂ ಎಸ್‌ಐಟಿ ತಂಡ ತೆರಳಿದ್ದು, ಅಲ್ಲಿ ದೂರುದಾರನ ಕುಟುಂಬಸ್ಥರಿಂದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿದೆ. ಈ ಮಾಹಿತಿ ಪ್ರಕರಣದ ದಾರಿಯನ್ನು ಮತ್ತಷ್ಟು ಬಿಚ್ಚಿಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ದೂರುದಾರ ಹಿಂದೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದವನಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಉಜಿರೆಗೆ ಬಂದು ಸಫಾಯಿ ಕರ್ಮಚಾರಿಯಾಗಿ ಕೆಲಸಕ್ಕೆ ಸೇರಿದ್ದನು. ಧರ್ಮಸ್ಥಳದ ಈ ಘಟನೆಗಳು ನಡೆದ ಅವಧಿಯಲ್ಲಿ ಅವನು ಆ ಭಾಗದಲ್ಲೇ ವಾಸಿಸುತ್ತಿದ್ದ ಕಾರಣದಿಂದ, ತನಿಖೆಗೆ ಅವನಿಂದ ದೊರೆತ ಹೇಳಿಕೆಗಳು ನಿರ್ಣಾಯಕವಾಗಿವೆ.
ಕುಟುಂಬದವರಿಂದ ಪಡೆದ ಮಾಹಿತಿ
ಪ್ರಕರಣದ ಹಿನ್ನಲೆಯಲ್ಲಿ ದೂರುದಾರನ ಎರಡನೇ ಪತ್ನಿ ಹಾಗೂ ಮಕ್ಕಳನ್ನು ಸಹ ಎಸ್‌ಐಟಿ ವಿಚಾರಣೆ ನಡೆಸಿದ್ದು, ಅವರಿಂದ ಕೆಲವು ಮಹತ್ವದ ಮಾಹಿತಿ ದೊರೆತಿದೆ. ಈ ಹೇಳಿಕೆಗಳು ಮತ್ತು ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ತನಿಖೆಯ ದಿಕ್ಕನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿವೆ.
ಒಟ್ಟಾರೆ, ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದಲ್ಲಿ ದೂರುದಾರನ ತಪ್ಪೊಪ್ಪಿಕೆ, ಅವನ ಕುಟುಂಬದಿಂದ ಸಂಗ್ರಹಿಸಿದ ಮಾಹಿತಿಗಳು ಹಾಗೂ ಮಂಡ್ಯ–ತಮಿಳುನಾಡಿನ ತನಿಖೆ ಪ್ರಕರಣವನ್ನು ಗಂಭೀರ ಹಂತಕ್ಕೇರಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಘಾತಕಾರಿ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದ್ದು, ಗ್ರಾಮಸ್ಥರಲ್ಲಿ ಕುತೂಹಲ ಹೆಚ್ಚುತ್ತಿದೆ.
ಧರ್ಮಸ್ಥಳದ ಹೆಸರು ಕೆಡಿಸಿದವರ ವಿರುದ್ದ ಎಸ್ಐಟಿ ಮತ್ತು ತಹಶಿಲ್ದಾರ್ ಗೆ ದೂರು
ಬೆಳ್ತಂಗಡಿ ತಾಲೂಕಿನಲ್ಲಿ ಧರ್ಮಸ್ಥಳದ ಹೆಸರು ಹಾಳು ಮಾಡುವ ಪ್ರಯತ್ನಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಗರಿಕರು ಸಂಘಟಿತವಾಗಿ ಎದ್ದು ಬಂದಿದ್ದಾರೆ. ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯರು ನೂರಾರು ಸಂಖ್ಯೆಯಲ್ಲಿ ತಾಲೂಕು ಕಚೇರಿ ಬಳಿ ಆಗಮಿಸಿ, ಎಸ್ಐಟಿ ಅಧಿಕಾರಿಗಳು ಮತ್ತು ತಹಶಿಲ್ದಾರರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದಲ್ಲಿ ವಿಶೇಷ ತನಿಖಾ ತಂಡ (SIT) ತನಿಖೆ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ತನಿಖೆಯನ್ನು ನೆಪವನ್ನಾಗಿ ಮಾಡಿಕೊಂಡು, ಕೆಲವರು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
“ಧರ್ಮಸ್ಥಳ ಕ್ಷೇತ್ರವನ್ನು ಕಳಂಕಿತಗೊಳಿಸುವ ಪ್ರಯತ್ನವು ಕೇವಲ ಒಬ್ಬರ ಅಥವಾ ಸಂಸ್ಥೆಯ ವಿರುದ್ಧದ ದಾಳಿಯಲ್ಲ, ಬದಲಾಗಿ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ” ಎಂದು ನಾಗರಿಕರು ಎಚ್ಚರಿಸಿದ್ದಾರೆ. ಇಂತಹ ಸುಳ್ಳುಪ್ರಚಾರ ಮತ್ತು ನಕಾರಾತ್ಮಕ ಸುದ್ದಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತವೆ ಎಂಬ ಆತಂಕವನ್ನು ಸಮಿತಿ ವ್ಯಕ್ತಪಡಿಸಿದೆ.
ಸಮಾಜವನ್ನು ಒಡೆಯುವ ಪ್ರಯತ್ನ
ಸಮಿತಿಯ ಸದಸ್ಯರು, “ಈ ರೀತಿಯ ಅಪಪ್ರಚಾರವು ಸಮಾಜದಲ್ಲಿ ವಿಭಜನೆ ಉಂಟುಮಾಡಿ, ಒಗ್ಗಟ್ಟಿಗೆ ಧಕ್ಕೆ ತರಲು ಕಾರಣವಾಗಬಹುದು. ಬೆಳ್ತಂಗಡಿ ತಾಲೂಕನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಗಮನಕ್ಕೆ ತಂದ ಮನವಿ
ತಾಲೂಕು ಕಚೇರಿಯಲ್ಲಿನ ಅಧಿಕಾರಿಗಳಿಗೆ ಸಲ್ಲಿಸಲಾದ ದೂರು ಪತ್ರದಲ್ಲಿ, ಅಪಪ್ರಚಾರದ ಮೂಲವನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಜೊತೆಗೆ, ಧರ್ಮಸ್ಥಳ ಕ್ಷೇತ್ರದ ಗೌರವವನ್ನು ಕಾಪಾಡುವುದು ಸರ್ಕಾರ ಮತ್ತು ಆಡಳಿತದ ಹೊಣೆಗಾರಿಕೆ ಎಂದೂ ಸಮಿತಿ ಒತ್ತಾಯಿಸಿದೆ.
