ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರ ಹಾಗೂ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ಇಂಡಿ ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಯಿತು. ಧರ್ಮಸ್ಥಳದ ಪಾವಿತ್ರ್ಯಕ್ಕೆ ಕಳಂಕ ತರಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ, ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇಂಡಿ (ಆ.27): ಧರ್ಮದ ಉಳಿವಿಗಾಗಿ ಧರ್ಮಯುದ್ಧ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಹಾಗೂ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ನಗರದಲ್ಲಿ ಇಂಡಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಡಾ.ಅಂಬೇಡ್ಕರ ವೃತ್ತದಿಂದ ಹೊರಟು ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನೆ ಮಿನಿ ವಿಧಾನಸೌಧ ತಲುಪಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಳುಗೌಡ ಪಾಟೀಲ, ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ಧರ್ಮಸ್ಥಳದಲ್ಲಿ ದೇವರ ಹೆಸರಿಗೆ ಕಳಂಕ ತರಲು ಕೆಲವರು ಷಡ್ಯಂತ್ರ ನಡೆಸಿದ್ದು, ಇದರ ಹಿಂದಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಪಾವಿತ್ರ್ಯಕ್ಕೆ ಕಳಂಕ ಹಚ್ಚಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಲಾಗಿದೆ. ಸಮಾಜ ವಿರೋಧಿ, ದೇಶ ವಿರೋಧಿಗಳ ಜಾಲ ಪತ್ತೆಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯುವ ಹುನ್ನಾರ ವಿಫಲಗೊಂಡಿದೆ. ಷಡ್ಯಂತ್ರ ನಡೆಸಿದವರ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಬಿಜೆಪಿಯಿಂದ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ, ಹತ್ಯೆಗಳು ನಡೆದಿವೆ. ತುಷ್ಟೀಕರಣ ರಾಜಕೀಯದಿಂದ ಸಮಾಜಘಾತುಕ ಶಕ್ತಿಗಳು ಹೆಚ್ಚಾಗಿವೆ. ಸೌಹಾರ್ದ ನಾಡಿಗೆ ಕಪ್ಪು ಚುಕ್ಕೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ದೇವಸ್ಥಾನಗಳ ವಿಷಯದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೆ ಬ್ರಿಟೀಷ್‌ ಹಾಗೂ ಪೋರ್ಚಗೀಸರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ್ದು ಕೇಳಿದ್ದೇವೆ. ಆದರೆ, ಇಂದು ನೋಡುವ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಯಾರೋ ಅನಾಮಿಕ ನೀಡಿದ ದೂರು ಆಧರಿಸಿ, ತನಿಖೆ ಕೈಗೊಂಡು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕೆಲಸ ಮಾಡಲಾಗಿದೆ. ಈ ತಪ್ಪಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಧರ್ಮಸ್ಥಳದ ನೆಲದಿಂದಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ತೀರ್ಥಕ್ಷೇತ್ರಗಳ ಸರ್ವನಾಶಕ್ಕಾಗಿ ದೇಶದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸತ್ಯ ಬಯಲಾಗಿದೆ. ಮಂಜುನಾಥನ ಶಕ್ತಿಯಿಂದ ಸತ್ಯ ಹೊರಗೆ ಬಂದಿದೆ. ಹಿಂದೂ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಶ್ವದ ಎಲ್ಲ ಧರ್ಮಗಳಿಗೆ ಬದುಕಲು ಕಲಿಸಿದ್ದೇ ಸನಾತನ ಹಿಂದೂ ಧರ್ಮ. ಹಿಂದೂಗಳ ಭಾವನೆಗೆ ಧಕ್ಕೆ ತರಲು ಹೊರಟರೆ ಹೊರಾಟ ತೀವ್ರ ಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಶಿರಸ್ತೇದಾರ ಎಸ್.ಆರ್.ಮುಜಗೊಂಡ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದೇವೆಂದ್ರ ಕುಂಬಾರ, ಶ್ರೀಮಂತ ಮೊಗಲಾಯಿ, ಅನೀಲಗೌಡ ಬಿರಾದಾರ, ರಾಜಕುಮಾರ ಸಗಾಯಿ, ಶಾಮಲಾ ಬಗಲಿ, ವಿಜಯಲಕ್ಷ್ಮೀ ರೂಗಿಮಠ, ಭೌರಮ್ಮ ನಾವಿ, ರವಿ ವಗ್ಗೆ, ವಿಜಯ ಮಾನೆ, ಶಾಂತು ಕಂಬಾರ, ಶಿವು ಬಗಲಿ, ಮಲ್ಲು ವಾಲಿಕಾರ, ಸಚೀನ ಬೊಳೆಗಾಂವ, ದತ್ತಾ ಬಂಡೆನವರ, ಪುಟ್ಟುಗೌಡ ಪಾಟೀಲ, ಬಾಗೇಶ ಮಲಘಾಣ, ಶ್ರೀಕಾಂತ ಬಡಿಗೇರ, ಸಾಗರ ಬಿರಾದಾರ, ವಿಜು ರಾಠೋಡ, ರಾಮಸಿಂಗ ಕನ್ನೊಳ್ಳಿ, ಸಂತೋಷಗೌಡ ಪಾಟೀಲ, ಡಾ.ರಮೇಶ ರಾಠೋಡ, ಶ್ರೀಶೈಲಗೌಡ ಪಾಟೀಲ, ಮಂಜು ದೇವರ, ಚನ್ನುಗೌಡ ಪಾಟೀಲ, ಪ್ರಶಾಂತ ಗವಳಿ, ಬತ್ತುಸಾವುಕಾರ ಹಾವಳಗಿ, ಮಹಾದೇವ ಗುಡ್ಡೊಡಗಿ, ಸಂಜು ದಶವಂತ, ಎಂ.ಪಿ.ಬೋರಾಮಣಿ, ಭೀಮರಾಯಗೌಡ ಬಿರಾದಾರ, ಶಂಕರಗೌಡ ಪಾಟೀಲ ಮೊದಲಾದವರು ಪಾಲ್ಗೊಂಡರು.