Dharmasthala Burude case: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಿಕೆಯಾಗಿದೆ. ಇದೇ ವೇಳೆ, ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಹೇಳಿಕೆ ದಾಖಲು ಪ್ರಕ್ರಿಯೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ.
ಮಂಗಳೂರು (ಸೆ.28): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಿಕೆಯಾಗಿದೆ.
ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ವಿಚಾರಣೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ, ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರಿ ಅಭಿಯೋಜಕರು ಮತ್ತೆ ಕಾಲಾವಕಾಶ ಕೇಳಿದ್ದರಿಂದ ಮಂಗಳವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: Mahesh Shetty Timarodi : ಅಕ್ರಮ ಶಸ್ತ್ರಾಸ್ತ್ರ ಕೇಸ್‌ನಲ್ಲಿ ಬೇಲ್‌ಗೆ ತಿಮರೋಡಿ ಅರ್ಜಿ!
ಬುರುಡೆ ಚಿನ್ನಯ್ಯ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣ
ಮಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಆರೊಪಿ ಚಿನ್ನಯ್ಯನಿಂದ ಬೆಳ್ತಂಗಡಿ ತಾಲೂಕು ನ್ಯಾಯಾಲಯದಲ್ಲಿ ಬಿಎನ್‌ಎಸ್‌ಎಸ್ 183 ಹೇಳಿಕೆ ಪಡೆಯುವ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದೆ. ಈ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೆ.23, ಸೆ.25ರಂದು ನಡೆದಿತ್ತು. ಪೂರ್ಣವಾಗದ ಹಿನ್ನೆಲೆಯಲ್ಲಿ ಶನಿವಾರವೂ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು.
ಅದರಂತೆ ಕೋರ್ಟ್‌ಗೆ ಹಾಜರಾದ ಚಿನ್ನಯ್ಯನಿಂದ ಸಂಪೂರ್ಣ ಹೇಳಿಕೆ ಪಡೆದುಕೊಳ್ಳಲಾಗಿದೆ. 3 ದಿನ ಸುದೀರ್ಘ 12.30 ಗಂಟೆಗಳ ಕಾಲ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಟಿ. ಎದುರು ಹೇಳಿಕೆಯ ಪ್ರತಿಯನ್ನು ಆರೋಪಿಗೆ ಓದಿ ತಿಳಿಸಿ ದೃಢೀಕರಣ ಮಾಡಲಾಗಿದೆ.
