ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ವಾಸ್ತವಾಂಶವನ್ನು ಜನರಿಗೆ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ. ಎಸ್‌ಐಟಿ ಇನ್ನೂ ತನಿಖಾ ವರದಿ ಸಲ್ಲಿಸಿಲ್ಲ. ಅದಕ್ಕೂ ಮುನ್ನ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು (ಸೆ.28): ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ವಾಸ್ತವಾಂಶವನ್ನು ಜನರಿಗೆ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ. ಎಸ್‌ಐಟಿ ಇನ್ನೂ ತನಿಖಾ ವರದಿ ಸಲ್ಲಿಸಿಲ್ಲ. ಅದಕ್ಕೂ ಮುನ್ನ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಗ್ರಾಮದ ತನಿಖಾ ವರದಿ ಬಂದ ನಂತರ ಅದರ ಬಗ್ಗೆ ಮಾತನಾಡಬಹುದು. ಎಸ್‌ಐಟಿ ಕುರಿತು ವೀರೇಂದ್ರ ಹೆಗ್ಗಡೆ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ.

ಆದರೆ, ತನಿಖಾ ವರದಿ ಬರುವ ಮುನ್ನವೇ ಈ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ. ರಾಜಕೀಯವಾಗಿ ಯಾರು ಏನೂ ಬೇಕಾದರೂ ಮಾತನಾಡಬಹುದು. ನಾನು ಸರ್ಕಾರದ ಪ್ರತಿನಿಧಿಯಾಗಿರುವುದರಿಂದ ಬೇರೆಯವರಂತೆ ಮಾತನಾಡಲು ಬರುವುದಿಲ್ಲ. ಈ ವಿಚಾರವಾಗಿ ವರದಿ ಬಂದ ನಂತರ ಮುಖ್ಯಮಂತ್ರಿ ಅವರು ಮತ್ತು ಗೃಹ ಸಚಿವರು ಅಧಿಕೃತ ಹೇಳಿಕೆ ನೀಡಬೇಕು. ನಂತರ ನಾನು ಮಾತನಾಡುತ್ತೇನೆ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ವಜಾ ಆಗಿದ್ದರೂ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಈಗ ಆ ವಿಚಾರ ಚರ್ಚೆ ಬೇಡ. ಸುಪ್ರೀಂ ಕೋರ್ಟ್‌ನಲ್ಲಿ ಹಾಕಿದ್ದ ಅರ್ಜಿ ವಜಾಗೊಂಡಿದೆ. ಪಿಐಎಲ್‌ ಹಾಕಿದವರಿಗೆ ಸ್ಥಳೀಯವಾಗಿ ತನಿಖೆ ಮಾಡಲಿ ಎಂದು ಕೋರ್ಟ್‌ ಬೈದು ಕಳುಹಿಸಿದ್ದು ಎಲ್ಲವೂ ಗೊತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಗ್ಗೆ ಯಾರು ಹೇಳುವುದಿಲ್ಲ. ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದ ಬಗ್ಗೆಯೂ ಮಾಹಿತಿಯಿದೆ. ಆದರೆ, ತನಿಖಾ ತಂಡದಿಂದ ಅಧಿಕೃತ ವರದಿ ಬಂದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

‘ಕಾವೇರಿ ಆರತಿ’ ಯಾವ ಕಾರಣಕ್ಕೂ ನಿಲ್ಲಲ್ಲ

ಕಾವೇರಿ ಆರತಿಗೆ ಯಾರೇ ತೊಂದರೆ ಮಾಡಿದರೂ ಯೋಜನೆ ಮಾತ್ರ ನಿಲ್ಲುವುದಿಲ್ಲ. ಪ್ರಾರ್ಥನೆ ಯಾರ ಮನೆಯ ಆಸ್ತಿಯೂ ಅಲ್ಲ. ನಾವು ಕಾವೇರಿ ಆರತಿ ಯೋಜನೆಯನ್ನು ಅಂದುಕೊಂಡ ರೀತಿಯಲ್ಲೇ ಅನುಷ್ಠಾನಗೊಳಿಸುವುದು ಶತಃಸಿದ್ಧ ಎಂದು ದಿಟ್ಟ ಉತ್ತರ ನೀಡಿದರು. ಈ ವರ್ಷದಿಂದಲೇ ವಾರಕ್ಕೆ ಮೂರು ದಿನಗಳ ಕಾಲ ಕಾವೇರಿ ಆರತಿ ಯೋಜನೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಕೆಲವೊಂದು ಕಾರಣಗಳಿಂದ ದೊಡ್ಡಮಟ್ಟದಲ್ಲಿ ಜಾರಿ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಈ ವರ್ಷ ಕಾವೇರಿ ಆರತಿಗೆ ಕೇವಲ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ ಎಂದರು.

ಕಾವೇರಿ ಆರತಿಯನ್ನು ಕೇವಲ ಧಾರ್ಮಿಕ ಕಾರ್‍ಯಕ್ರಮವಾಗಿ ರೂಪಿಸದೆ ರಾಜ್ಯ ಮತ್ತು ಹೊರ ರಾಜ್ಯದಿಂದ ನಿತ್ಯ ಹತ್ತು ಸಾವಿರ ಜನರು ಬಂದು ವೀಕ್ಷಣೆ ಮಾಡುವಂತೆ ಆಯೋಜನೆ ಮಾಡಿ, ಪ್ರವಾಸೋಧ್ಯಮ ದೃಷ್ಠಿಯಿಂದ ಕೆಆರ್‌ಎಸ್‌ನ್ನು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸುತ್ತೇವೆ ಎಂದು ಖಚಿತವಾಗಿ ಹೇಳಿದರು. ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೊಳಿಸುವ ಶಕ್ತಿಯನ್ನು ಆ ತಾಯಿ ಕರುಣಿಸುತ್ತಾಳೆ ಎಂಬ ನಿರೀಕ್ಷೆಯೊಂದಿಗೆ ಕಾವೇರಿ ಆರತಿಯನ್ನು ಆರಂಭಿಸಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಆದರೆ, ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ ಎಂಬ ಆಶಾಭಾವನೆ ನಮ್ಮದಾಗಿದೆ ಎಂದರು.