ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಸುಜಾತ ಭಟ್‌ರನ್ನು SIT ನಾಲ್ಕನೇ ದಿನವೂ ವಿಚಾರಣೆ ನಡೆಸುತ್ತಿದೆ. ಸಾಕ್ಷ್ಯ ನೀಡಲು ವಿಫಲವಾದರೆ ಬಂಧನ ಸಾಧ್ಯತೆ ಇದೆ. ಬುರುಡೆ ಗ್ಯಾಂಗ್‌ನೊಂದಿಗಿನ ಸಂಪರ್ಕ, ಯೂಟ್ಯೂಬರ್ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮಂಗಳೂರು (ಆ.29): ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ತಾಯಿ ಎನ್ನಲಾದ ಸುಜಾತ ಭಟ್‌ರನ್ನು ವಿಶೇಷ ತನಿಖಾ ತಂಡ (SIT) ಇಂದು ನಾಲ್ಕನೇ ದಿನವೂ ವಿಚಾರಣೆಗೆ ಕರೆದಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ತೀವ್ರ ವಿಚಾರಣೆಯಲ್ಲಿ ಸುಜಾತ ಭಟ್‌ರಿಂದ ಸಾಕ್ಷ್ಯ ನೀಡಲು ವಿಫಲರಾಗಿದ್ದು, ಇಂದು ದಾಖಲೆ ಸಲ್ಲಿಸಲು SIT ಕೊನೆಯ ಅವಕಾಶ ನೀಡಿದೆ. ಈ ವಿಚಾರಣೆಯ ನಂತರ ಸುಜಾತ ಭಟ್‌ರನ್ನು ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ನಿನ್ನೆ (ಆಗಸ್ಟ್ 28) ರಾತ್ರಿ 10 ಗಂಟೆಯವರೆಗೆ ಸುಜಾತ ಭಟ್‌ರನ್ನ SIT ವಿಚಾರಣೆಗೊಳಪಡಿಸಿತ್ತು. ತನಿಖಾಧಿಕರಿಗಳ ಪ್ರಶ್ನೆಗಳಿಂದ ತಬ್ಬಿಬ್ಬಾಗಿದ್ದರು. ವಿಚಾರಣೆ ಬಳಿಕ ಆಟೋರಿಕ್ಷಾದಲ್ಲಿ ಉಜಿರೆಯ ಲಾಡ್ಜ್‌ಗೆ ವಾಪಸ್ ತೆರಳಿದ್ದರು. ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ SIT ಸೂಚನೆ ನೀಡಿದ್ದು, ಅನನ್ಯ ಭಟ್‌ರ ಅಸ್ತಿತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸುಜಾತ ಭಟ್ ತಮ್ಮ ಹೇಳಿಕೆಗಳಿಗೆ ಸಾಕ್ಷ್ಯ ನೀಡಲು ವಿಫಲರಾದರೆ, ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ರೌಡಿಶೀಟರ್‌ನ ಮಾನವ ಹಕ್ಕು ಅಧಿಕಾರಿಯೆಂದು ಪರಿಚಯ; ಮಟ್ಟಣ್ಣನವರ್ ವಿರುದ್ಧ ಕೇಸ್ ದಾಖಲಿಸುವಂತೆ ಆಯೋಗ ಸೂಚನೆ!

ಸುಜಾತ ಭಟ್ ರನ್ನ ಬುರುಡೆ ಗ್ಯಾಂಗ್ ಸಂಪರ್ಕಕ್ಕೆ ತಂದಿದ್ದು ಯಾರು?

SIT ವಿಚಾರಣೆ ವೇಳೆ, ಧರ್ಮಸ್ಥಳದ ಬುರುಡೆ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸುಜಾತ ಭಟ್ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಗ್ಯಾಂಗ್‌ನೊಂದಿಗೆ ಸಂಪರ್ಕಕ್ಕೆ ತಂದವರು ಯುನೈಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್ ಎಂದು ಸುಜಾತ ಭಟ್ ಬಾಯ್ಬಿಟ್ಟಿದ್ದಾರೆ. ಜಯಂತ್ ಟಿ ಮೂಲಕ ಸಂಪರ್ಕಕ್ಕೆ ಬಂದ ಅಭಿಷೇಕ್, ನಾಲ್ಕೈದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸುಜಾತ ಭಟ್‌ರನ್ನು ಭೇಟಿಯಾಗಿ ‘ಬಯಲಾದ ಧರ್ಮಸ್ಥಳದ ಮತ್ತೊಂದು ಕರ್ಮಕಾಂಡ’ ಎಂಬ ಶೀರ್ಷಿಕೆಯಡಿ ಸಂದರ್ಶನ ನಡೆಸಿದ್ದರು. ಈ ಸಂದರ್ಶನದ ಬಳಿಕ ಪ್ರಕರಣ ಸಾರ್ವಜನಿಕವಾಗಿ ಚರ್ಚೆಗೆ ಬಂದಿತ್ತು.

ಬುರುಡೆ ಗ್ಯಾಂಗ್‌ನ ಷಡ್ಯಂತ್ರ ಬಯಲು:

SIT ತನಿಖೆಯಿಂದ ತಿಳಿದುಬಂದಿರುವಂತೆ, ಬುರುಡೆ ಗ್ಯಾಂಗ್ ಈ ಪ್ರಕರಣವನ್ನು ಗಂಭೀರಗೊಳಿಸಲು ಯೋಜನೆ ರೂಪಿಸಿತ್ತು ಎನ್ನಲಾಗಿದೆ. ಸುಜಾತ ಭಟ್‌ರನ್ನು ಬಳಸಿಕೊಂಡು, 'ಮಗಳ ಅಸ್ಥಿಪಂಜರವಾದರೂ ಕೊಡಿ' ಎಂದು ದೂರು ದಾಖಲಿಸುವಂತೆ ಮಾಡಿದ್ದು ಇದೇ ಗ್ಯಾಂಗ್ ಆಮೂಲಕ ಧರ್ಮಸ್ಥಳ ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಲಾಗಿತ್ತು. ಅಲ್ಲದೇ ಈ ದೂರಿನ ಮೂಲಕ ಧರ್ಮಸ್ಥಳದ ಖ್ಯಾತಿಗೆ ಧಕ್ಕೆ ತರುವ ಷಡ್ಯಂತ್ರ ಮಾಡಲಾಗಿತ್ತು. ಬುರುಡೆ ಗ್ಯಾಂಗ್ ಅಂದುಕೊಂಡಂತೆಯೇ ಯೂಟ್ಯೂಬ್‌ನಲ್ಲಿ ಅಭಿಷೇಕ್‌ರ ಸಂದರ್ಶನ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು, ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು.

SITನ ಮುಂದಿನ ಕ್ರಮವೇನು?

ಇಂದಿನ ವಿಚಾರಣೆಯಲ್ಲಿ ಸುಜಾತ ಭಟ್ ತಮ್ಮ ಹೇಳಿಕೆಗೆ ಸಾಕ್ಷ್ಯ ನೀಡದಿದ್ದರೆ, SIT ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ. ಅನನ್ಯ ಭಟ್‌ರ ಅಸ್ತಿತ್ವವೇ ಸಂದಿಗ್ಧವಾಗಿದ್ದು, ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಸುಜಾತ ಭಟ್‌ಗೆ ಮಕ್ಕಳಿಲ್ಲ ಎಂದು ಸ್ಥಳೀಯರು ತಿಳಿಸಿರುವ ಮಾಹಿತಿಯೂ SITಗೆ ಲಭ್ಯವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದ್ದು, ಇಂದಿನ ವಿಚಾರಣೆಯ ಫಲಿತಾಂಶವನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Dharmasthala Case: ತಿಮ್ಮರೋಡಿ ಜೊತೆ ವಸಂತ್ ಗಿಳಿಯಾರ್‌ರ ಎರಡು ವರ್ಷ ಹಳೆಯ ಫೋಟೋ ವೈರಲ್!

ಪ್ರಕರಣದ ಸತ್ಯಾಸತ್ಯತೆಗೆ ಕಾದಿರಿ:

ಧರ್ಮಸ್ಥಳದ ಈ ಪ್ರಕರಣದಲ್ಲಿ ಸುಜಾತ ಭಟ್‌ರ ಹೇಳಿಕೆಗಳು, ಬುರುಡೆ ಗ್ಯಾಂಗ್‌ನ ಒಡನಾಟ, ಮತ್ತು ಯೂಟ್ಯೂಬರ್ ಅಭಿಷೇಕ್‌ರ ಪಾತ್ರದ ಬಗ್ಗೆ SIT ತನಿಖೆ ತೀವ್ರಗೊಳಿಸಿದೆ. ಇಂದಿನ ವಿಚಾರಣೆಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದ್ದು, ಸತ್ಯಾಸತ್ಯತೆ ಬಯಲಾಗುವ ನಿರೀಕ್ಷೆಯಿದೆ.