ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಪ್ರಕರಣದಲ್ಲಿ ಹೊಸ ತಿರುವುಗಳು. ತಾಯಿ ಸುಜಾತಾ ಭಟ್ ನೀಡಿರುವ ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿದೆ. ಇಬ್ಬರು ಗಂಡಂದಿರ ಹೆಸರು, ಅನನ್ಯಾಳ ಅಸ್ತಿತ್ವದ ಬಗ್ಗೆಯೇ ಅನುಮಾನಗಳು ಮೂಡಿವೆ. ಅವರ ಭಾವ ಹೇಳಿದ ಮಾಹಿತಿ ನೋಡಿ

ಧರ್ಮಸ್ಥಳದಲ್ಲಿ ನನ್ನ 22 ವರ್ಷದ ಎಂ.ಬಿ.ಬಿ.ಎಸ್ ಮಗಳು ಅನನ್ಯಾ ಭಟ್ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿರುವ ಸುಜಾತಾ ಭಟ್‌ಗೆ ಮಗು ಆಗಿರುವುದು ಮನೆಯವರಿಗೇ ಗೊತ್ತಿಲ್ಲ. ಯಾವ ಗಂಡನಿಗೆ ಮಗು ಆಗಿದೆ ಎಂಬ ಮಾಹಿತಿಯಿಲ್ಲ. ಆಕೆ, ನಕ್ಸಲೈಟ್ ಸಂಪರ್ಕದಲ್ಲಿದ್ದಳು ಎಂಬ ಹೆಸರು ಕೇಳಿ ಶಾಕ್ ಆಗಿತ್ತು, ಆದರೆ ಮನೆಯಿಂದ ಹೊರಗೆ ಹಾಕಿದ್ದೇವಲ್ಲಾ? ಎಂದು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಸುಜಾತಾಳ ಭಾವ ಮಹಾಬಲೇಶ್ವರ ಹೇಳಿದ್ದಾರೆ. ಆದರೆ, ಸುಜಾತಾ ಭಟ್‌ ಇಬ್ಬಿಬ್ಬರು ಗಂಡನ ಹೆಸರು ಕೇಳಿ ಶಾಕ್ ಆಗಿದ್ದಾರೆ.

ಈವರೆಗೂ ಸುಜಾತಾ ಭಟ್ ಮದುವೆ ಆಗಿರುವ ಬಗ್ಗೆ ಅಥವಾ ಅನನ್ಯಾ ಭಟ್ ಹುಟ್ಟಿದ ವಿಚಾರದ ಬಗ್ಗೆ ನಮ್ಮ ಕುಟುಂಬದವರಿಗೆ ಯಾರಿಗೂ ಮಾಹಿತಿಯಿಲ್ಲ. ಅವರಿಗೆ ಮಕ್ಕಳಾಗಿದ್ದಾಗಲೀ, ಒಂದು ಮದುವೆ ಆಗಿದ್ದೇನೆ ಎಂದು ಬಂದು ಹೇಳಿಕೊಂಡಿದ್ದ ಗಂಡನ ಊರು ರಿಪ್ಪನ್‌ಪೇಟೆ ಎಂಬುದು ಮಾತ್ರ ಗೊತ್ತಿದೆ. ಮೊದಲಿನ ಗಂಡನ ಮಗಳಾ ಅಥವಾ ಇನ್ನೊಬ್ಬರಿಗೆ ಆಗಿದ್ದಾ? ಎಂಬುದು ಗೊತ್ತಿಲ್ಲ. ಬೆಗಳೂರಿಗೆ ಬಂದು ನಮ್ಮನ್ನು ಸಂಪರ್ಕ ಮಾಡಿದ್ದಾಗ, ಆಸ್ಪತ್ರೆ ಬಿಟ್ಟ ನಂತರ ಪುನಃ ಮಲ್ಲೇಶ್ವರದಲ್ಲಿ ಕಿರಾಣಿ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿಸಿದ್ದೆ. ಅಲ್ಲಿ ಒಂದು ವಾರ ಕೆಲಸ ಮಾಡಿ ಓಡಿ ಹೋದಳು. ಉಡುಪಿಯಲ್ಲಿ ಸಾಕಷ್ಟು ಅನಾಚಾರ ಕೆಲಸ ಮಾಡಿದ್ದಾಳೆ. ಕೆಲವರು ಬಂದು ನೀವು ಆಕೆಯನ್ನು ನೋಡಿಕೊಳ್ಳುವುದಿಲ್ಲವಾ? ಏನೆಲ್ಲಾ ಮಾಡ್ತಿದ್ದಾಳೆ ಗೊತ್ತಾ ಎಂದು ದೂರು ನೀಡಿದರು. ಆಗ ನಮ್ಮ ಕುಟುಂಬದಿಂದ ಹೊರಗೆ ಹಾಕಿದ್ದಾರೆ ಎಂದು ಹೇಳಿದ್ದೆವು. ಅಕ್ಕನಿಗೆ ಮದುವೆ ಆಗುವುದಕ್ಕೆ ಮುಂಚೆ ತಂಗಿ ಸುಜಾತಾಗೆ 1983ರಲ್ಲಿ ಮದುವೆ ಆಗಿದೆ ಎಂಬುದು ಶುದ್ಧ ಸುಳ್ಳು. ಅನನ್ಯಾ ಭಟ್ ಎಂಬ ಹುಡುಗಿಯೂ ಇಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ವಿಚಾರ.

ಇನ್ನು ನಮ್ಮ ಸ್ನೇಹಿತರೊಬ್ಬರು ಬಂದು ನಮಗೆ ಹೇಳಿದರು. ನಿಮ್ಮ ನಾದಿನಿ ಕಳಸದಲ್ಲಿ ನಕ್ಸಲೈಟ್ ಸಂಪರ್ಕದಲ್ಲಿದ್ದಾಳೆ ಎಂದು ಹೇಳಿದರು. ಅದು ನನಗೆ ವಿಚಾರ ಗೊತ್ತಿಲ್ಲ. ಇನ್ನು ಆಕೆ ನಕ್ಸಲರ ಸಂಪರ್ಕದಲ್ಲಿ ಇದ್ದಾಳೆ ಎಂಬ ಮಾಹಿತಿ ಕೇಳಿದರೂ ನಾವು ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. ಮನೆಯಿಂದ ಹೊರಗೆ ಹಾಕಿದ್ದಾಗಿ ಸುಮ್ಮನಾಗಿದ್ದೆವು. ಈ ವಿಚಾರದ ಬಗ್ಗೆ ಯಾರಿಗಾದರೂ ಫೋನ್ ಮಾಡಿ ಸಂಪರ್ಕ ಮಾಡುವ ಅಥವಾ ದೂರು ನೋಡುವ ಗೋಜಿಗೆ ನಾವು ಹೋಗಲಿಲ್ಲ ಎಂದು ತಿಳಿಸಿದರು.

ಇಬ್ಬಿಬ್ಬರು ಗಂಡನ ಹೆಸರು ಕೇಳಿ ಪೊಲೀಸರು ಶಾಕ್:

ಸುಜಾತಾ ಭಟ್ ತನ್ನ ಮಗಳು 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ ಆರೋಪಗಳು ಒಂದೊಂದಾಗಿ ಸುಳ್ಳಾಗುತ್ತಿವೆಯೇ ಎಂಬ ಅನುಮಾನ ಕಾಡುತ್ತಿವೆ. ತನಿಖಾಧಿಕಾರಿಗಳು ಇದೀಗ ಸುಜಾತಾ ಭಟ್ ಅವರ ಕುರಿತಾಗಿಯೇ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಪೊಲೀಸರಿಗೆ ಅನನ್ಯಾ ಭಟ್ ನಿಜವಾಗಿಯೂ ಸುಜಾತಾ ಭಟ್ ಅವರ ಮಗಳೇ ಹೌದಾ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಈ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದಾಗ, ದೂರಿನಲ್ಲಿ ಸುಜಾತಾ ಭಟ್ ನೀಡಿದ್ದ ಬೆಂಗಳೂರಿನ ಪದ್ಮನಾಭನಗರದ ವಿಳಾಸ ಪೊಲೀಸರಿಗೆ ಹೊಸ ಸುಳಿವು ಕೊಟ್ಟಿದೆ.

ಪದ್ಮನಾಭನಗರದಲ್ಲಿ ಸುಜಾತಾ ಭಟ್ ಬಾಡಿಗೆಗೆ ಪಡೆದಿದ್ದ ಮನೆಯ 'ರೆಂಟಲ್ ಅಗ್ರಿಮೆಂಟ್‌' (ಬಾಡಿಗೆ ಕರಾರು) ಪರಿಶೀಲಿಸಿದಾಗ, ಪೊಲೀಸರಿಗೆ ನಿಜಕ್ಕೂ ಆಘಾತ ಕಾದಿತ್ತು. ಆದರೆ, ಮಗಳು ನಾಪತ್ತೆ ಆಗಿದ್ದಾಳೆ ಎಂದು ಕೊಟ್ಟಿರುವ ದೂರಿನಲ್ಲಿ ತನ್ನ ಗಂಡನ ಹೆಸರು 'ಅನಿಲ್ ಭಟ್' ಎಂದು ಸುಜಾತಾ ನಮೂದು ಮಾಡಿದ್ದಾರೆ. ಬಾಡಿಗೆ ಒಪ್ಪಂದದಲ್ಲಿ ತನ್ನ ಗಂಡನ ಹೆಸರು 'ಪ್ರಭಾಕರ್ ರಾವ್', ದೂರಿನಲ್ಲಿ 'ಅನಿಲ್ ಭಟ್' ಹೆಸರು ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಇದಲ್ಲದೆ, ಸುಜಾತಾ ಅವರ ಬ್ಯಾಂಕ್ ಖಾತೆಯ ನಾಮಿನಿಯಲ್ಲಿ ಮತ್ತೊಬ್ಬ ವ್ಯಕ್ತಿಯ ಹೆಸರು ದಾಖಲಾಗಿತ್ತು. ಇದರಿಂದಾಗಿ ಸುಜಾತಾ ಭಟ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆಯ ಬಗ್ಗೆ ತೀವ್ರ ಅನುಮಾನ ಮೂಡಿದೆ.

ಅನನ್ಯಾಳ ಅಸ್ತಿತ್ವಕ್ಕೆ ಪುರಾವೆಗಳಿಲ್ಲ:

ಅನನ್ಯಾ ಭಟ್ ನಿಜವಾಗಿಯೂ ಅನಿಲ್ ಭಟ್ ಮತ್ತು ಸುಜಾತಾ ಭಟ್ ದಂಪತಿಗೆ ಜನಿಸಿದ್ದಳಾ? ಆಕೆ ಯಾವಾಗ, ಎಲ್ಲಿ ಜನಿಸಿದಳು? ಎಲ್ಲಿ ಶಾಲಾ-ಕಾಲೇಜು ಶಿಕ್ಷಣ ಪಡೆದಿದ್ದಳು? ಮಣಿಪಾಲ್ ಮೆಡಿಕಲ್ ಕಾಲೇಜಿನ ದಾಖಲೆಗಳಲ್ಲಿ ಅನನ್ಯಾ ಭಟ್ ಎಂಬ ವಿದ್ಯಾರ್ಥಿನಿಯ ಹೆಸರೇ ಇಲ್ಲ. ಸುಜಾತಾ ಭಟ್ ನೀಡಿದ ಮಾಹಿತಿಯಲ್ಲಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ.

ಪ್ರಭಾಕರ್ ರಾವ್ ಯಾರು?

ಅನಿಲ್ ಭಟ್ ಜೊತೆಗಿನ ದಾಂಪತ್ಯ ಯಾವಾಗ ಕೊನೆಯಾಯಿತು? ಪ್ರಭಾಕರ್ ರಾವ್ ಜೊತೆಗಿನ ಸಂಬಂಧ ಯಾವಾಗ ಆರಂಭವಾಯಿತು? ಬ್ಯಾಂಕ್ ನಾಮಿನಿಯಾಗಿರುವ ಮತ್ತೊಬ್ಬ ವ್ಯಕ್ತಿ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರ ಬಳಿ ಉತ್ತರಗಳಿಲ್ಲ. ಇದುವರೆಗೆ, ಅನನ್ಯಾ ಭಟ್ ಅಸ್ತಿತ್ವದಲ್ಲಿದ್ದಾಳೆ ಎಂಬುದಕ್ಕೆ ಒಂದೇ ಒಂದು ಪುರಾವೆಯೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತಾ ಭಟ್ ಅವರ ಬಗ್ಗೆಯೇ ಮತ್ತಷ್ಟು ಆಳವಾದ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಸುಜಾತಾ ಭಟ್ ಅವರ ಆರೋಪಗಳ ಹಿಂದಿರುವ ನಿಜವಾದ ಕಾರಣಗಳೇನು ಮತ್ತು ಆಕೆಯ ಉದ್ದೇಶವೇನು ಎಂಬುದನ್ನು ಕಂಡುಹಿಡಿಯುವುದು ಪೊಲೀಸರ ಮುಂದಿರುವ ದೊಡ್ಡ ಸವಾಲಾಗಿದೆ. ಈ ಪ್ರಕರಣಕ್ಕೆ ಇನ್ನಷ್ಟು ಹೊಸ ತಿರುವುಗಳು ಸಿಗುವ ಸಾಧ್ಯತೆ ಇದೆ.