ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮಸ್ಥರು ಕೃಷ್ಣಾ ನದಿಯ ಪ್ರವಾಹದ ನಡುವೆಯೂ ಗೆದ್ದಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಿದ್ದಾರೆ. ಈ ಧೈರ್ಯದ ಭಕ್ತಿಯನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಕ್ತರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಯಾದಗಿರಿ (ಆ.20): ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯ ಪ್ರವಾಹ ಲೆಕ್ಕಿಸದೇ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾ ಮಸ್ಥರು ಭಕ್ತಿಭಾವದಿಂದ ಗೆದ್ದಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ಮಂಗಳವಾರದಂದು (ನಿನ್ನೆ) ನಡೆದ ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ, ದೇವರಗಡ್ಡಿ ಗ್ರಾಮದ ಭಕ್ತರು ಗೆದ್ದಮ್ಮ ದೇವಿಯ ಮೂರ್ತಿಯನ್ನು ಹೊತ್ತು ಕೃಷ್ಣಾ ನದಿಯ ತೀರಕ್ಕೆ ಬಂದಿದ್ದರು. ಪ್ರವಾಹದ ಆತಂಕದ ನಡುವೆಯೂ, ಭಕ್ತರು ದೇವಿಯ ಮೂರ್ತಿಗೆ ವಿಶೇಷ ಪೂಜೆ-ಕೈಂಕರ್ಯ ನೆರವೇರಿಸಿದರು. ಹೂವಿನಿಂದ ಅಲಂಕರಿಸಲ್ಪಟ್ಟ ತೆಪ್ಪವನ್ನು ಭಕ್ತಿಪೂರ್ವಕವಾಗಿ ಪೂಜಿಸಿ, ಉತ್ಸವವನ್ನು ಆಚರಿಸಿದರು. ತೆಪ್ಪದಲ್ಲಿ ಹುಗ್ಗಿ, ಮಡಿಕೆ ಇತ್ಯಾದಿಗಳನ್ನು ಇಟ್ಟು, ಭಕ್ತರು ಕೃಷ್ಣಾ ನದಿಯ ಅರ್ಧಕ್ಕೆ ಸಾಗಿ ತೆಪ್ಪವನ್ನು ಅರ್ಪಿಸಿದರು.
ಈ ಧೈರ್ಯದಿಂದ ಕೂಡಿದ ಭಕ್ತಿಯ ಕಾರ್ಯವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ಭೀತಿಯ ನಡುವೆಯೂ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡ ಗ್ರಾಮಸ್ಥರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು 'ನದಿ ರಭಸವಾಗಿ ಹರಿಯುವಾಗ ಪ್ರಾಣಾಪಾಯ ತರುವ ಈ ಆಚರಣೆ ಬೇಕಾ' ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರಲಿ, ಗೆದ್ದಮ್ಮ ದೇವಿಯ ತೆಪ್ಪೋತ್ಸವವು ದೇವರಗಡ್ಡಿ ಗ್ರಾಮದ ಜನರ ಭಕ್ತಿಯ ಶಕ್ತಿ, ಸಂಪ್ರದಾಯದ ಮಹತ್ವ ತೋರಿಸಿದೆ.
