ರಾಯಚೂರಿನಲ್ಲಿ ಉಪಲೋಕಾಯುಕ್ತ ಬಿ. ವೀರಪ್ಪ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಿತು. ಭ್ರಷ್ಟಾಚಾರದ ವಿರುದ್ಧ ತೀಕ್ಷ್ಣವಾದ ಹೇಳಿಕೆ ನೀಡಿದ ಅವರು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ರಾಯಚೂರು(ಆ.29): ರಾಯಚೂರಿನ ಕೃಷಿ ವಿವಿಯ ಬಸವೇಶ್ವರ ಸಭಾಂಗಣದಲ್ಲಿ ಇಂದು ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಮತ್ತು ಕುಂದುಕೊರತೆ ಸಭೆ ಜರುಗಿತು. ನೂರಾರು ಸಾರ್ವಜನಿಕರು ಮತ್ತು ಅಧಿಕಾರಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಭ್ರಷ್ಟಾಚಾರದ ವಿರುದ್ಧ ತೀಕ್ಷ್ಣವಾದ ಹೇಳಿಕೆ ನೀಡಿ, ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಭ್ರಷ್ಟಾಚಾರ ತೊಲಗಿಸಲು ನಾನೂ ಆಸೆಪಡುತ್ತೇನೆ

ದೇಶದಲ್ಲಿ ಭ್ರಷ್ಟಾಚಾರ ತೊಲಗಿಸುವುದು ಸಾಧ್ಯವಾದೀತೆ ಗೊತ್ತಿಲ್ಲ, ಆದರೆ ನನಗೂ ಆಸೆಯಿದೆ. ನಮ್ಮದು ಭ್ರಷ್ಟಾಚಾರ ಮುಕ್ತ ದೇಶವಾಗಬೇಕು. ನಾನೇ ಭ್ರಷ್ಟಾಚಾರ ಮುಕ್ತನಾದರೆ ಗಟ್ಟಿಯಾಗಿ ಮಾತನಾಡಬಹುದು. ಎಲ್ಲರೂ ಮನಸ್ಸು ಮಾಡಿದರೆ ಭ್ರಷ್ಟಾಚಾರವನ್ನು ತೊಲಗಿಸಬಹುದು ಎಂದು ಹೇಳಿದರು.

ಭ್ರಷ್ಟಾಚಾರದಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತೆ?

180 ದೇಶಗಳ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 96ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದ ಉಪ ಲೋಕಾಯುಕ್ತ ವೀರಪ್ಪ ಅವರು, ಕರ್ನಾಟಕ 28 ರಾಜ್ಯಗಳಲ್ಲಿ ಭ್ರಷ್ಟಾಚಾರದಲ್ಲಿ 5ನೇ ಸ್ಥಾನದಲ್ಲಿದೆ. ಇಷ್ಟು ಭ್ರಷ್ಟಾಚಾರವಿದ್ದರೂ ಭಾರತ ವಿಶ್ವದ 5ನೇ ಬಲಿಷ್ಠ ದೇಶವಾಗಿದೆ ಎಂಬುದೇ ಅಚ್ಚರಿ. ಒಂದು ವೇಳೆ ದೇಶದಿಂದ ಸಂಪೂರ್ಣವಾಗಿ ಭ್ರಷ್ಟಾಚಾರ ತೊಲಗಿದರೆ ಭಾರತ ವಿಶ್ವದ ನಂಬರ್ ಒನ್ ಆಗುವುದರಲ್ಲಿ ಅಚ್ಚರಿಯಿಲ್ಲ ಎಂದರು.

ಮಕ್ಕಳ ಭ್ರಷ್ಟಾಚಾರದ ದುಡ್ಡಿನಲ್ಲಿ ಓದಬಾರದು:

ಮಕ್ಕಳು ಭ್ರಷ್ಟಾಚಾರದ ದುಡ್ಡಿನಲ್ಲಿ ಓದಬಾರದು, ಹೆಂಡತಿ ಆ ದುಡ್ಡಿನಿಂದ ಒಡವೆ ಧರಿಸಬಾರದು. ಭ್ರಷ್ಟಾಚಾರಿಗಳಿಗೆ ಗೌರವ ಕೊಡುವ ಬದಲು, ಪ್ರಾಮಾಣಿಕರಿಗೆ ಗೌರವ ನೀಡುವ ಸಂಸ್ಕೃತಿ ಬೆಳೆಸಬೇಕು. ಹಿಂದಿನ ಕಾಲದಲ್ಲಿ ಸಿಡಿಲು ರೋಗಿಗಳನ್ನು ದೂರ ತಳ್ಳುತ್ತಿದ್ದಂತೆ, ಅದರಂತೆ ಭ್ರಷ್ಟಾಚಾರಿಗಳನ್ನೂ ಸಮಾಜದಿಂದ ದೂರ ತಳ್ಳಬೇಕು ಎಂದು ಕಿವಿಮಾತು ಹೇಳಿದರು.

ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ:

ಪಿಡಿಒ ಮತ್ತು ಇಒಗಳನ್ನು ಉದ್ದೇಶಿಸಿ ಮಾತನಾಡಿದ ಉಪಲೋಕಾಯುಕ್ತರು, ನೆಟ್ಟಗೆ ಕೆಲಸ ಮಾಡಬೇಕು. ಪಿಡಿಒ ಮತ್ತು ಇಒಗಳೇನು ಪಾಕಿಸ್ತಾನ ಹಾಗೂ ಚೀನಾದಿಂದ ಬಂದಿಲ್ಲ. ಕರ್ತವ್ಯ ಮರೆತು ಕೈ ಒಡ್ಡುವ ಸಂಸ್ಕೃತಿ ಬಿಡಿ ನೆಟ್ಟಗೆ ಕೆಲಸ ಮಾಡಿ ಎಚ್ಚರಿಕೆ ನೀಡಿದರು ಜೊತೆಗೆ, ಸುಳ್ಳು ಕೇಸ್‌ಗಳನ್ನು ದಾಖಲಿಸಿದರೆ ಕಲಂ 20ರಡಿ ಕೇಸ್‌ ಹಾಕುವೆ ಎಂದು ಎಚ್ಚರಿಕೆ ನೀಡಿದರು.

ಭಾರತಕ್ಕೆ ಭ್ರಷ್ಟಾಚಾರ ಒಂದು ಪಿಡುಗು

"ದೇಶದ ಗಡಿಯಲ್ಲಿ ಯೋಧರು ಪ್ರಾಣತ್ಯಾಗ ಮಾಡಿ ನಮ್ಮನ್ನು ಕಾಪಾಡುತ್ತಿದ್ದಾರೆ. ಆದರೆ ದೇಶದೊಳಗೆ ಭ್ರಷ್ಟಾಚಾರ ಒಂದು ಪಿಡುಗಾಗಿದೆ. ದುಡ್ಡು ಕೊಟ್ಟು ಓಟು ಹಾಕುವ ಸಂಸ್ಕೃತಿಯನ್ನು ಬಿಡಬೇಕು. 146 ಕೋಟಿ ಜನಸಂಖ್ಯೆಯಲ್ಲಿ ಕೇವಲ 15-16 ಕೋಟಿ ಜನರು ಮಾತ್ರ ಒಳ್ಳೆಯವರಿದ್ದಾರೆ. ಅದಕ್ಕೇ ಮಳೆ-ಬೆಳೆ ಆಗುತ್ತಿದೆ ಎಂದರು.

ನಿಮಗೆ ನ್ಯಾಯ ಬೇಕಾದರೆ ಕೇಳುವವರಾಗಿ:

ನಿಮಗೆ ನ್ಯಾಯ ಬೇಕಾದರೆ, ನೀವು ಕೇಳುವವರಾಗಬೇಕು, ಪ್ರಶ್ನಿಸುವವರಾಗಬೇಕು. ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸತ್ಯವನ್ನು ಒಪ್ಪಿಕೊಂಡು ನ್ಯಾಯ ಒದಗಿಸುವುದು ಲೋಕಾಯುಕ್ತದ ಧ್ಯೇಯವಾಗಿದೆ ಎಂದು ಬಿ.ವೀರಪ್ಪ ತಿಳಿಸಿದರು.

ರಾಯಚೂರಿನ ಈ ಸಭೆ ಭ್ರಷ್ಟಾಚಾರದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ. ಪ್ರಾಮಾಣಿಕತೆಯೇ ನಮ್ಮ ಶಕ್ತಿ, ಭ್ರಷ್ಟಾಚಾರವನ್ನು ಒಗ್ಗಟ್ಟಿನಿಂದ ತೊಲಗಿಸೋಣ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಎಲ್ಲರಿಗೂ ಸಂದೇಶ ನೀಡಿದರು.