ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿ, ರಸ್ತೆ ಗುಂಡಿ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ಪರಿಶೀಲಿಸಿದರು. 30 ದಿನಗಳಲ್ಲಿ ಗುಂಡಿ ಮುಚ್ಚಲು ಗಡುವು ನೀಡಿದ್ದು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.27ರ ಮಧ್ಯಾಹ್ನ ಸಿಟಿ ರೌಂಡ್ಸ್ ನಡೆಸಿ, ರಸ್ತೆಗಳ ಸ್ಥಿತಿ ಹಾಗೂ ಗುಂಡಿಗಳ ಸಮಸ್ಯೆ ಪರಿಶೀಲಿಸಿದರು. ಮಧ್ಯಾಹ್ನ 3 ಗಂಟೆಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ಹೊರಟ ಸಿಎಂ, ಮೊದಲು ವಿಂಡ್ಸರ್ ಮ್ಯಾನರ್ ಬಳಿಯ ರಸ್ತೆಗೆ ಭೇಟಿ ನೀಡಿ ನಡೆಯುತ್ತಿರುವ ದುರಸ್ತಿ ಕಾರ್ಯಗಳ ಪರಿಶೀಲನೆ ನಡೆಸಿದರು. ನಂತರ ವಿಬಿ ಗಾರ್ಡನ್ ರಸ್ತೆ, ಹೆಬ್ಬಾಳ ಹೊರವರ್ತುಲ ರಸ್ತೆ, ಹೆಣ್ಣೂರು ಫ್ಲೈಓವರ್ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ನೇರ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಕೆ.ಜೆ. ಜಾರ್ಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಡಳಿತ ಅಧಿಕಾರಿ ತುಷಾರ್ ಗಿರಿನಾಥ್, ಜಿಬಿಎ ಆಯುಕ್ತ ಮಹೇಶ್ವರ ರಾವ್ ಹಾಗೂ ಇತರೆ ಅಧಿಕಾರಿಗಳು ಸಿಎಂ ಜೊತೆಗಿದ್ದರು.
ಗುಂಡಿಗಳ ಬಗ್ಗೆ ಸಿಎಂ ಎಚ್ಚರಿಕೆ
ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುತ್ತಾ, 30 ದಿನಗಳೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಇಲ್ಲವಾದರೆ ಕಮಿಷನರ್‌ಗಳನ್ನೇ ಅಮಾನತ್ತು ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಗುಣಮಟ್ಟದ ಕಾಮಗಾರಿ ಮಾಡಬೇಕು ಕೇವಲ ಜೆಲ್ಲಿ ಹಾಕದೆ, ಸಿಮೆಂಟ್ ಬಳಸಿ ಸಮರ್ಪಕವಾಗಿ ದುರಸ್ತಿ ಮಾಡಬೇಕು. ಒಂದು ವೇಳೆ ಗಡುವಿನೊಳಗೆ ಕಾರ್ಯ ಪೂರೈಸದಿದ್ದರೆ ತಕ್ಕ ಉತ್ತರ ನೀಡಲಾಗುವುದು ಎಂದರು. ಇನ್ನು ಇದೇ ವೇಳೆ ಬಿಜೆಪಿ ಆಡಳಿತಾವಧಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಸರಿಯಾಗಿ ನಡೆದಿದ್ದರೆ ಇಂದು ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ನಾವು ಮಳೆಗಾಲದ ಮುಂಚೆಯೇ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿದ್ದೇವೆ. ಪ್ರತಿ ವರ್ಷ ಗುಂಡಿಗಳು ಬರುವುದು ಸಹಜ, ಆದರೆ ಅದನ್ನು ತಕ್ಷಣ ಸರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಮೆಟ್ರೋ ಕಾಮಗಾರಿಯ ನಿರ್ಲಕ್ಷ್ಯ
ಮೆಟ್ರೋ ಕಾಮಗಾರಿ ವೇಳೆ ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ, ವೈಟ್ ಟಾಪಿಂಗ್ ಹಾನಿ, ಹಾಗೂ ನೀರು ಹರಿವಿನ ವ್ಯವಸ್ಥೆ ಮುಚ್ಚಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ತಕ್ಷಣವೇ ರಿಪೇರಿ ಕಾರ್ಯ ಪ್ರಾರಂಭಿಸಲು ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ತ್ಯಾಜ್ಯ ನಿರ್ವಹಣೆಯ ನಿರ್ಲಕ್ಷ್ಯ
ಹೆಬ್ಬಾಳ ಹೊರವರ್ತುಲ ರಸ್ತೆ ಹಾಗೂ ಹೆಣ್ಣೂರು ಫ್ಲೈಓವರ್ ಬಳಿ ರಸ್ತೆ ಬದಿಯಲ್ಲಿ ಜಮಾಯಿಸಿರುವ ತ್ಯಾಜ್ಯವನ್ನು ಕಂಡ ಸಿಎಂ ಗರಂ ಆದರು. “ಇಷ್ಟು ಹಳೆಯ ಕಸ ಇಲ್ಲಿ ಜಮಾಯಿಸಿಕೊಂಡಿದೆ. ಇಷ್ಟೊಂದು ವರ್ಷಗಳಲ್ಲಿ ಎಷ್ಟು ಅಧಿಕಾರಿಗಳು ಇಲ್ಲಿ ಹಾದು ಹೋಗಿದ್ದಾರೆ, ಯಾರಿಗೂ ಕಣ್ಣಿಗೆ ಬೀಳಲಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡರು. ತಕ್ಷಣವೇ 24 ಗಂಟೆಗಳೊಳಗೆ ತ್ಯಾಜ್ಯ ತೆರವುಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಅಲ್ಲದೇ, ಬೈರತಿ ಕ್ರಾಸ್ ಬಳಿ ಕಾರು ನಿಲ್ಲಿಸಿ ತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆ ಆಯುಕ್ತರಿಂದ ನೇರ ಮಾಹಿತಿ ಪಡೆದು, ವಾರ್ಡ್ ನಂ. 23ರ ಘನ ತ್ಯಾಜ್ಯ ಕೇಂದ್ರದ ನಿರ್ಲಕ್ಷ್ಯಕ್ಕಾಗಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಮತ್ತು ರಾಘವೇಂದ್ರ ಪ್ರಸಾದ್ ಅವರಿಗೆ ನೋಟಿಸ್ ನೀಡಲು ಸೂಚಿಸಿದರು.
ವೈಟ್ ಟಾಪಿಂಗ್ ಹೊಣೆಗಾರಿಕೆ ಗುತ್ತಿಗೆದಾರರದ್ದು
ಸಿಎಂ ಸಿದ್ದರಾಮಯ್ಯ ಗುತ್ತಿಗೆದಾರರ ಜವಾಬ್ದಾರಿ ಕುರಿತು ಸ್ಪಷ್ಟವಾಗಿ ಹೇಳಿ, “ಒಮ್ಮೆ ವೈಟ್ ಟಾಪಿಂಗ್ ಮಾಡಿದ ಬಳಿಕ, ಆ ರಸ್ತೆಯ ನಿರ್ವಹಣೆಗೆ ಬಿಬಿಎಂಪಿ (ಈಗಿನ ಜಿಬಿಎ) ಹಣ ಕೊಡುವುದಿಲ್ಲ. ಗುತ್ತಿಗೆದಾರರೇ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೆಲಸ ಸರಿಯಾಗಿ ಮಾಡದಿದ್ದರೆ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳೇ ಹೊಣೆಗಾರರು” ಎಂದು ಎಚ್ಚರಿಸಿದರು.
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸಿಎಂ ಸಿದ್ದರಾಮಯ್ಯ ನಡೆಸಿದ ಈ ಸಿಟಿ ರೌಂಡ್ಸ್ ಸಂದರ್ಭದಲ್ಲಿ, ರಸ್ತೆ ಗುಂಡಿ, ತ್ಯಾಜ್ಯ ನಿರ್ವಹಣೆ, ನೀರು ಹರಿವು, ವೈಟ್ ಟಾಪಿಂಗ್ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಅವರ ಖಡಕ್ ಎಚ್ಚರಿಕೆಯಿಂದಾಗಿ ಮುಂದಿನ ದಿನಗಳಲ್ಲಿ ನಗರದಲ್ಲಿ ದುರಸ್ತಿ ಕಾರ್ಯಗಳು ವೇಗ ಪಡೆಯುವ ನಿರೀಕ್ಷೆಯಿದೆ.
