ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಟಿಕೆಟ್‌ ದರ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತ ಆದೇಶವನ್ನು ಹೈಕೋರ್ಟ್ ಸೆ.23ಕ್ಕೆ ಕಾಯ್ದಿರಿಸಿದೆ.

ಬೆಂಗಳೂರು (ಸೆ.17): ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಟಿಕೆಟ್‌ ದರ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತ ಆದೇಶವನ್ನು ಹೈಕೋರ್ಟ್ ಸೆ.23ಕ್ಕೆ ಕಾಯ್ದಿರಿಸಿದೆ.

ಟಿಕೆಟ್‌ ದರ ನಿಗದಿ ಸಂಬಂಧ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್‌ ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ರವಿ ಹೊಸಮನಿ ಅವರ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ತಕರಾರು ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂಬ ಮಧ್ಯಂತರ ಮನವಿಗೆ ಸಂಬಂಧಿಸಿ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶವನ್ನು ಸೆ.23ಕ್ಕೆ ಕಾಯ್ದಿರಿಸಿತು.

ಇದಕ್ಕೂ ಮುನ್ನ ಅರ್ಜಿದಾರ ಸಂಸ್ಥೆಗಳ ಪರ ವಕೀಲರು, ಟಿಕೆಟ್‌ ದರ 200 ರು. ನಿಗದಿಪಡಿಸಿರುವ ಸರ್ಕಾರದ ನಿರ್ಧಾರ ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿದೆ. ಸಿನಿಮಾ ಮಂದಿರಗಳನ್ನು ನಿರ್ಮಿಸಲು ಕೋಟ್ಯಂತರ ರು. ವ್ಯಯಿಸಲಾಗುತ್ತದೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಸಿನಿಮಾ ನಿರ್ಮಿಸಲು ಸಾಕಷ್ಟು ಶ್ರಮ, ಬಂಡವಾಳ ಬೇಕಾಗುತ್ತದೆ. ಚಿತ್ರ ನಿರ್ಮಾಣ, ಪ್ರದರ್ಶನದ ಬಗ್ಗೆ ಮಾಹಿತಿಯೇ ಸರ್ಕಾರಕ್ಕೆ ಇಲ್ಲ. ಅಂಕಿ-ಅಂಶ ಸಂಗ್ರಹಿಸದೇ ಸರ್ಕಾರ ಸ್ವೇಚ್ಛೆಯ ನಿರ್ಧಾರ ತೆಗೆದುಕೊಂಡಿದೆ ಎಂದು ಆಕ್ಷೇಪಿಸಿದರು.

ಅಲ್ಲದೆ, ಸರ್ಕಾರದ ನಿರ್ಧಾರ ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. 2017ರಲ್ಲೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದ ನಂತರ ಸರ್ಕಾರ ಆ ಆದೇಶ ವಾಪಸ್‌ ಪಡೆದಿತ್ತು. ಟಿಕೆಟ್‌ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ

ವಿವೇಚನೆಯಿಲ್ಲದೆ ಸರ್ಕಾರ ಟಿಕೆಟ್‌ ದರ 200ರು ನಿಗದಿಪಡಿಸಿ ನಿರ್ಧಾರ ಕೈಗೊಂಡಿದೆ. ಚಿತ್ರಮಂದಿರದಲ್ಲಿ ವೀಕ್ಷಕರಿಗೆ ಸೌಲಭ್ಯ ಒದಗಿಸಿರುವ ಸಂಸ್ಥೆಗಳೇ ದರ ನಿಗದಿಪಡಿಸಬೇಕಿದೆ. ಟಿಕೆಟ್‌ ದರ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಆದ್ದರಿಂದ ಟಿಕೆಟ್‌ ದರ ಮಿತಿ ಆದೇಶಕ್ಕೆ ತಡೆ ನೀಡಬೇಕು ಕೋರಿದರು. ಸರ್ಕಾರದ ಪರ ವಕೀಲರು, ಬಜೆಟ್‌ನಲ್ಲೇ ಸಿನಿಮಾ ಟಿಕೆಟ್‌ ದರ ಮಿತಿ ಬಗ್ಗೆ ಘೋಷಿಸಲಾಗಿತ್ತು. ಕರಡು ಅಧಿಸೂಚನೆಗೆ ಆಕ್ಷೇಪಣೆ ಪರಿಗಣಿಸಿ ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಟಿಕೆಟ್‌ ದರ ನಿಗದಿಪಡಿಸುವ ಅಧಿಕಾರವಿದೆ ಎಂದು ಸಮರ್ಥಿಸಿಕೊಂಡರು.

ಸರ್ಕಾರದ ತೀರ್ಮಾನ ಬೆಂಬಲಿಸಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರ ವಕೀಲರು, ಮಂಡಳಿ ಮನವಿ ಮೇರೆಗೆ ಸರ್ಕಾರ ದರ ನಿಗದಿ ನಿರ್ಧಾರ ಕೈಗೊಂಡಿದೆ. ಆದ್ದರಿಂದ ಅರ್ಜಿ ಕುರಿತು ತಮ್ಮ ವಾದ ಆಲಿಸಬೇಕು ಎಂದು ಕೋರಿದರು. ಈ ಮನವಿಯನ್ನು ಅರ್ಜಿದಾರರ ಪರ ವಕೀಲರು ತೀವ್ರವಾಗಿ ಆಕ್ಷೇಪಿಸಿದರು.